ಬೆಂಗಳೂರು: ರಾಜ್ಯದ ಮಕ್ಕಳಿಗಾಗಿ ಶಿಕ್ಷಣ ಇಲಾಖೆಯಿಂದ ವಿದ್ಯಾ ಗಮ ಯೋಜನೆ ಶೀಘ್ರದಲ್ಲೇ ಕಾರ್ಯರೂಪಕ್ಕೆ ತರುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
1ರಿಂದ 5, 6 ರಿಂದ 8, 9 ಮತ್ತು 10ನೇ ತರಗತಿಗಳ ಮೂರು ಗುಂಪು ರಚಿಸಿ, ಪ್ರತಿ 25 ವಿದ್ಯಾರ್ಥಿಗಳಿಗೆ ಒಬ್ಬ ಮಾರ್ಗದರ್ಶಿ ಶಿಕ್ಷಕರನ್ನು ನಿಯೋಜಿಸುವುದು. ಮಾರ್ಗದರ್ಶಿ ಶಿಕ್ಷಕರ ಮೂಲಕ ಮೂರು ಕೊಠಡಿಗಳ ಅಂದರೆ ಇಂಟೆಲಿಜೆಂಟ್ ಕೊಠಡಿ, ಬ್ರಿಲಿಯಂಟ್ ಕೊಠಡಿ, ಜೀನಿಯಸ್ ಕೊಠಡಿ ಎಂದು ಮೂರು ಭಾಗಗಳಾಗಿ ವಿಂಗಡಿಸಲಾಗುವುದು. ಆ ಮೂಲಕ ಸೌಲಭ್ಯ ವಂಚಿತ ವಿದ್ಯಾರ್ಥಿಗಳಿಗೂ ಪಾಠ ತಲುಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.
ಇಂದು ಪತ್ರಿಕಾ ರಂಗದವರೊಂದಿಗೆ ವೆಬಿನಾರ್ ಸಂವಾದದಲ್ಲಿ ಭಾಗಿಯಾಗಿ ಮಾತಾನಾಡಿದ ಸಚಿವರು, ಮಕ್ಕಳ ಕಲಿಕೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಸರ್ಕಾರವು ಈಗಾಗಲೇ ನಿರ್ದಿಷ್ಟ ಕ್ರಿಯಾಯೋಜನೆ ರೂಪಿಸಿದ್ದು, ಎಲ್ಲ ಸಮುದಾಯಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅನುಷ್ಠಾನಗೊಳ್ಳಲಿದೆ ಎಂದರು.
ತಂತ್ರಜ್ಞಾನಾಧಾರಿತ ಕಲಿಕೆಯ ಕುರಿತಂತೆ ತಜ್ಞರ ಸಮಿತಿ ಸಲ್ಲಿಸಿರುವ ವರದಿಯ ಆಧಾರದಲ್ಲಿ ‘ವಿದ್ಯಾ ಗಮ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಇಲಾಖೆಯು ರೂಪಿಸುತ್ತಿದ್ದು, ಇಷ್ಟರಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ. ಈ ಯೋಜನೆಯು ಎಲ್ಲ ವರ್ಗಗಳ ಶಾಲೆಗಳನ್ನು, ವಿದ್ಯಾರ್ಥಿಗಳನ್ನು ಸಮರ್ಥವಾಗಿ ತಲುಪಲಿದೆ ಎಂದು ಹೇಳಿದರು.
ವೆಬಿನಾರ್ನಲ್ಲಿ ವ್ಯಕ್ತವಾದ ಅಭಿಪ್ರಾಯಗಳು
- ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳು ಆರಂಭಿಸುವ ಸಾಧ್ಯತೆಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಲಭ್ಯವಿರುವ ಸಂಪನ್ಮೂಲಗಳ ಆಧಾರದಲ್ಲಿ ವಿಕೇಂದ್ರೀಕರಣಗೊಳಿಸಿ ಮಕ್ಕಳ ಹಿತದೃಷ್ಟಿಯಿಂದ ಪರ್ಯಾಯ ಕಲಿಕಾ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಬೇಕು.
- ತಜ್ಞರ ಅಭಿಪ್ರಾಯಗಳೇನೇ ಇರಲಿ, ಒಟ್ಟಾರೆ ನಾಡಿನ ಮಕ್ಕಳ ಹಿತದೃಷ್ಟಿಯಿಂದ ಕಲಿಕಾ ಚಟುವಟಿಕೆಗಳನ್ನು ಆರಂಭಿಸುವುದು ಒಳ್ಳೆಯದು. ಮಕ್ಕಳು ಶೈಕ್ಷಣಿಕ ಚಟವಟಿಕೆಯಿಂದ ಹೆಚ್ಚು ದಿನಗಳು ವಿಮುಖವಾಗುವುದು ಅಷ್ಟು ಉಚಿತವಲ್ಲವಾದ್ದಾರಿಂದ ಯಾವುದಾದರೂ ರೀತಿಯಿಂದ ಅವರಿಗೆ ತರಗತಿಗಳು ತಲುಪುವಂತಾಗಬೇಕು. ಶಾಲೆಗಳು ಇಲ್ಲವೇ ಕಲಿಕೆ ಒಮ್ಮೆ ಶುರುವಾದರೆ ಸಮಸ್ಯೆಗಳಿಗೆ ಒಂದು ಪರಿಹಾರ ದೊರೆಯಬಹುದು.
- ಒಂದೊಂದು ತರಗತಿಗೆ ಒಂದೊಂದು ಚಾನೆಲ್ ಮೂಲಕ ಪಾಠ ಪ್ರವಚನ ಮಾಡುವುದು ಒಳ್ಳೆಯದು. ಸಾಧ್ಯವಾಗದಿದ್ದರೆ ನಾಲ್ಕು ಚಾನಲ್ ಮೂಲಕವಾದರೂ ಈ ಕೆಲಸ ಮುಂದುವರೆಯಬೇಕು. ಆನ್‍ಲೈನ್ ಶಿಕ್ಷಣ ಗ್ರಾಮೀಣ ಪ್ರದೇಶಗಳನ್ನು ಅಷ್ಟು ಪರಿಣಾಮಕಾರಿಯಾಗಿ ತಲುಪುವುದು ಸಾಧ್ಯವಲ್ಲವಾದ್ದರಿಂದ ಇದಕ್ಕೆ ಟಿ.ವಿ. ಚಾನಲ್‍ಗಳು ಅನುಕೂಲಕರ. ಇದರಲ್ಲಿ ವಿದ್ಯಾರ್ಥಿ ಜೀವನದ ಪ್ರಮುಖ ತಿರುವುಗಳಾದ ಅಂದರೆ ಮಂಡಳಿ ಪರೀಕ್ಷೆ ನಡೆಸುವ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದು ಒಳಿತು. ಉಳಿದ ತರಗತಿಗಳಿಗೆ ಕಲಿಕಾ ಕ್ರಿಯಾಶೀಲತೆಯನ್ನು ಮುಂದುವರೆಸುವ ನಿಟ್ಟಿನಲ್ಲಿ ಅದ್ಯತೆ ನೀಡಬೇಕು.
- ಕರ್ನಾಟಕ ರಾಜ್ಯವು ಬೇರೆ ರಾಜ್ಯಗಳಿಗೆ ಹೋಲಿಸಿದರೆ ಶಿಕ್ಷಣದ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿದೆ. ಈ ಸಾಮಾಜಿಕ ಸ್ಥಿತಿಗತಿಯಲ್ಲಿ ಆನ್‍ಲೈನ್ ಬೇಕು ಬೇಡ ಎಂಬ ಚರ್ಚೆಗಿಂತ ಯಾವುದು ಯಾರಿಗೆ ಅವಶ್ಯಕತೆ ಇದೆಯೋ ಆ ಮೂಲಕ ಅವರನ್ನು ತಲುಪುವುದು ಮುಖ್ಯವಾಗಬೇಕಿದೆ. ಸ್ಥಳೀಯ ಟಿ.ವಿ. ಚಾನಲ್‍ಗಳು ಹಾಗೂ ಖಾಸಗಿ ಚಾನಲ್‍ಗಳ ಬಳಕೆಯನ್ನು ಇಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡು ರೆಕಾರ್ಡೆಡ್ ತರಗತಿಗಳ ಮೂಲಕ ಮಕ್ಕಳನ್ನು ತಲುಪಬೇಕಿದೆ ಎಂದರು. ಹೇಗೆ ಕಲಿಸುತ್ತೇವೆ ಎಂಬುದಕ್ಕಿಂತ ಕಲಿಕೆ ನೀಡುವುದಷ್ಟೇ ಮುಖ್ಯವಾಗಬೇಕು. ಆಯಾ ಪರಿಸ್ಥಿತಿಯಲ್ಲಿ ಲಭ್ಯವಿರುವ ಯಾವುದೇ ಅವಕಾಶ ಇಲ್ಲವೇ ಸೌಲಭ್ಯವನ್ನೂ ಈ ಸಂದರ್ಭದಲ್ಲಿ ಬಳಸಿಕೊಳ್ಳುವುದು ಒಳ್ಳೆಯದೇ ಎಂದರು. ಸುರಕ್ಷಿತ ಪ್ರದೇಶವಿರುವೆಡೆ ಶಾಲಾ ತರಗತಿಗಳನ್ನೇ ಪ್ರಾರಂಭಿಸುವುದು ಸಹ ಒಳ್ಳೆಯದು.
- ಕಲಿಕೆ ನಿರಂತರವಾಗಿರಲು ಇಂದು ವಿಕೇಂದ್ರೀಕರಣ ಮಾಡಬೇಕಾದ ತುರ್ತು ಅಗತ್ಯತೆ ಇದೆ. ಈ ಪರಿಸ್ಥಿತಿಯಲ್ಲಿ ಇಡೀ ರಾಜ್ಯವೊಂದನ್ನೇ ಒಂದು ಘಟಕವಾಗಿ ಗಮನಿಸದೇ ಬೇರೆ ಬೇರೆ ಜಿಲ್ಲೆ ಮತ್ತು ತಾಲೂಕುಗಳನ್ನು ಒಂದು ಘಟಕವಾಗಿ ಆಯಾ ಭಾಗದ ಪರಿಸ್ಥಿತಿಯ ಆಧಾರದಲ್ಲಿ ಶಾಲೆ ತೆರೆಯುವುದು ಸೇರಿದಂತೆ ಯಾವುದೇ ಸೌಲಭ್ಯದ ಮೂಲಕವಾಗಲೀ ಕಲಿಕೆ ಮಕ್ಕಳನ್ನು ತಲುಪಲು ಸರ್ಕಾರ ಕ್ರಮ ಕೈಗೊಳ್ಳಬೇಕು.
- ಕೇರಳ ರಾಜ್ಯದಲ್ಲಿ ಈಗಾಗಲೇ ಸ್ಥಳೀಯ ಟಿವಿ ಚಾನಲ್‍ಗಳನ್ನು ಬಳಸಿಕೊಂಡು ಪಾಠ ಪ್ರವಚನಗಳನ್ನು ಪ್ರಾರಂಭಿಸಲಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಶಿಕ್ಷಣ ನೀಡಲು ಮುಂದಾಗಬೇಕು.
- ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಪರಿಸ್ಥಿತಿ ಶೋಚನೀಯವಾಗಿದ್ದು, ಸರ್ಕಾರವು ಕೂಡಲೇ ಕಲಿಕೆಗೆ ಬೇಕಾದ ಶುಲ್ಕವನ್ನು ಪೋಷಕರಿಂದ ಪಡೆಯಲು ಅನುಮತಿ ನೀಡಬೇಕಲ್ಲದೇ ಬೋಧನಾ ಶುಲ್ಕವನ್ನು ಮಾತ್ರ ಪಡೆದು ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಡಬೇಕು. ಇದು ಸರ್ಕಾರಿ ಶಾಲೆಗಳನ್ನು ಉತ್ತೇಜಿಸುವ ಸುಸಂದರ್ಭವಾಗಿದ್ದು, ಸರ್ಕಾರವು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಪೈಲಟ್ ಕಾರ್ಯಕ್ರಮವಾಗಿ ಈ ಸಂದರ್ಭದಲ್ಲಿ ಕೊರೊನಾ ಮುಕ್ತ ಭಾಗಗಳಲ್ಲಿ ಸಾಮಾಜಿಕ ಅಂತರದಲ್ಲಿ ಶಾಲೆಗಳನ್ನು ಆರಂಭಿಸಲು ಸರ್ಕಾರ ಕ್ರಮಕೈಗೊಳ್ಳಬೇಕು.
- ತರಗತಿಗಳನ್ನು ಆರಂಭಿಸಲು ಪರಿಸ್ಥಿತಿ ಅನಿಶ್ಚಿತವಾಗಿರುವುದರಿಂದ ಪಡಶಾಲೆ ತರಗತಿಗಳ ಮೂಲಕ ಚಟುವಟಿಕೆ ಆರಂಭಿಸಬಹುದು. ಕಲಿಕೆ ಮುಂದುವರೆಸಲು ಸಾಧ್ಯವಾಗಬಹುದಾದ ಎಲ್ಲ ಆಯಾಮಗಳನ್ನೂ ಬಳಸಿಕೊಂಡರೂ ತಪ್ಪೇನು ಇಲ್ಲ.
- ಕೊರೊನಾ ಈಗಾಗಲೇ ಸಮುದಾಯವನ್ನು ವ್ಯಾಪಿಸಿದೆಯಾದರೂ ಅದು ಮಕ್ಕಳನ್ನು ಬಾಧಿಸಿಲ್ಲ. ಹಾಗಾಗಿ ಶಾಲೆಗಳನ್ನು ತೆರೆಯುವ ಕುರಿತು ಕ್ರಮ ಕೈಗೊಳ್ಳುವುದರತ್ತವೂ ಗಮನಹರಿಸಬೇಕು. ಈ ಸಂದರ್ಭದಲ್ಲಿ ಚಾನಲ್‍ಗಳ ಮೂಲಕ ಕಲಿಕಾ ಚಟುವಟಿಕೆ ಆರಂಭಿಸುವುದು ಒಳ್ಳೆಯ ಕ್ರಮವಾಗಿದೆ.
- ಎಲ್‍ಕೆಜಿ ಮತ್ತು ಯುಕೆಜಿಯಂತಹ ತರಗತಿಗಳಿಗೆ ಆನ್‍ಲೈನ್ ಪರಿಣಾಮಕಾರಿಯಾಗಲಾರದು. ಇದು ಮಕ್ಕಳಿಗೆ ಆಟವಾಡುವ ವಯಸ್ಸಾಗಿರುವುದರಿಂದ ಈ ವರ್ಷ ಎಲ್‍ಕೆಜಿ-ಯುಕೆಜಿ ತರಗತಿಗಳನ್ನು ಆರಂಭಿಸದಿದ್ದರೂ ಪರವಾಗಿಲ್ಲ. ಅವರನ್ನು ಮುಂದಿನ ವರ್ಷ ನೇರವಾಗಿ ಒಂದನೇ ತರಗತಿಗೆ ಸೇರಿಸಿಕೊಳ್ಳಬಹುದು. ಪ್ರಾಯೋಗಿಕ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿಕೊಳ್ಳುವುದರೊಂದಿಗೆ ಆನ್‍ಲೈನ್‍ನಲ್ಲಾದರೂ ಶಿಕ್ಷಣ ನೀಡುವುದರಲ್ಲಿ ತಪ್ಪೇನು ಇಲ್ಲ. ಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಶಿಕ್ಷಕರನ್ನು ನೇಮಿಸುವುದು ಸರಿಯಲ್ಲ, ಅವರು ಬೋಧನೆಯಲ್ಲಿ ಮಾತ್ರ ತೊಡಗಿಸಿಕೊಳ್ಳುವಾಂತಾಗಬೇಕು.
- ಸಾಧ್ಯವಾದರೆ ತಂತ್ರಜ್ಞಾನಾಧಾರಿತ ಶಿಕ್ಷಣ ನೀಡಿ. ಹಾಗೆಯೇ ಕೊರೊನಾ ಮುಕ್ತ ಗ್ರಾಮಗಳಲ್ಲಿ ಶಾಲೆ ಆರಂಭಿಸಲು ಮುಂದಾಗಬೇಕು. ಯಾವುದೇ ಆಯಾಮದ ಮೂಲಕ ಮಕ್ಕಳ ಕಲಿಕೆ ನಿರಂತರವಾಗಿರುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.