ಬೆಂಗಳೂರು: ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ಅಪಹರಣ ಹೇಗಾಯಿತು?, ಅಪಹರಣಕಾರರು ಆ ಸಂದರ್ಭದಲ್ಲಿ ಹೇಗೆ ನಡೆದುಕೊಂಡರು? ಎಂಬ ಸಂಗತಿಯನ್ನು ಮಾಧ್ಯಮಗಳ ಮುಂದೆ ಮಾಜಿ ಸಚಿವ ವರ್ತೂರು ಪ್ರಕಾಶ್ ವಿವರಿಸಿದ್ದಾರೆ.
'ಈಗಾಗಲೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ಮಾತನಾಡಿದ್ದೇನೆ. ಪ್ರಕರಣ ನಡೆದ ಬಗ್ಗೆ ಅವರಿಗೆ ವಿವರಿಸಿದ್ದೇನೆ. ನನಗೆ ಮತ್ತು ನನ್ನ ಮಕ್ಕಳಿಗೆ ರಕ್ಷಣೆ ಬೇಕು ಅಂತ ಕೇಳಿದ್ದೇನೆ. ಸದ್ಯಕ್ಕೆ ನನ್ನ ಕುಟುಂಬಕ್ಕೆ ಜೀವ ಬೆದರಿಕೆಯಿದ್ದು, ಆರೋಪಿಗಳು ನಾಲ್ಕು ಗಂಟೆಗಳ ಕಾಲ ನನಗೆ ಚಿತ್ರ ಹಿಂಸೆ ಕೊಟ್ಟು 30 ಕೋಟಿ ರೂ ಹಣ ಕೊಡಿ ಎಂದು ಬೇಡಿಕೆ ಇಟ್ಟರು. ಮೊದಲು ಕಿಡ್ನಾಪ್ ಮಾಡಿ, ಬಳಿಕ 11:30 ಕ್ಕೆ ಕಾಡಿಗೆ ಕರೆದುಕೊಂಡು ಹೋದರು. ಅಲ್ಲಿ ಕಾಲು, ಕೈ ಕಟ್ಟಿ ಹಾಕಿ ಹೊಡೆದರು' ಎಂದರು.
ಓದಿ: ಸಿನಿಮೀಯ ಶೈಲಿಯಲ್ಲಿ ಅಪಹರಣ: ವರ್ತೂರು ಪ್ರಕಾಶ್ ನೀಡಿದ ದೂರಿನ ಸಂಪೂರ್ಣ ಮಾಹಿತಿ....
'ಮರುದಿನ ಬೆಳಗ್ಗೆ 6:30ಕ್ಕೆ ನನ್ನನ್ನು ಬೇರೆ ಕಡೆ ಕರೆದೊಯ್ದಿದ್ದು, ಹಣ ಎಲ್ಲಿ ಇಟ್ಟಿರುವೆ ಎಂದು ಪ್ರಶ್ನಿಸಿ, ಮತ್ತೆ ಚಿತ್ರಹಿಂಸೆ ನೀಡಿದರು. ಇದಕ್ಕೆ ನಾನು ಪ್ರತಿಕ್ರಿಯಿಸಿ, ಮೊನ್ನೆ ತಾನೆ ಚುನಾವಣೆ ಮಾಡಿದ್ದೇನೆ. ನನ್ನ ಬಳಿ ಹಣವಿಲ್ಲ ಅಂದೆ. ನಂತರ ನನ್ನ ಫ್ರೆಂಡ್ಗೆ ಕರೆ ಮಾಡಿ 50 ಲಕ್ಷ ಹಣ ಕೊಡುವಂತೆ ನನಗೆ ಮೊಬೈಲ್ ಕೊಟ್ಟು ಮಾತನಾಡಿಸಿದರು. ನಂತರ ನನ್ನ ಡ್ರೈವರ್ಗೆ ಸಿಕ್ಕಾಪಟ್ಟೆ ಹೊಡೆದು, ಇಬ್ಬರನ್ನು ಬೇರೆ ಬೇರೆ ಇಟ್ಟಿದ್ದರು. ಹಾಗೆಯೇ ಯಾರದ್ದೇ ಕರೆ ಬಂದರೂ ನಾನು ರಿಸೀವ್ ಮಾಡಿ ನಾರ್ಮಲ್ ಆಗಿ ಮಾತನಾಡುವಂತೆ ಮಾಡಿದ್ದರು. ತದ ನಂತರ ಡ್ರೈವರ್ ತಪ್ಪಿಸಿಕೊಂಡು ಹೋದಾಗ ಗೂಂಡಾಗಳು ಭಯಗೊಂಡು ನನ್ನನ್ನು ಹೊಸಕೋಟೆ ಬಳಿ ತಂದು ಬಿಟ್ಟರು. ನಾನು ಹೊಸಕೋಟೆ ಬಳಿ ಕೆಲವರನ್ನು ಮಾತನಾಡಿಸಿದೆ. ಆದರೆ ಮಂಕಿ ಕ್ಯಾಪ್ ಹಾಕಿದ ಕಾರಣ ಸಾರ್ವಜನಿಕರಿಗೆ ನನ್ನ ಪರಿಚಯ ಸಿಗಲಿಲ್ಲ. ಮಂಕಿ ಕ್ಯಾಪ್ ಬಿಚ್ಚಿದ ನಂತ್ರ ನನ್ನನ್ನು ನಂಬಿದರು. ತದ ನಂತರ ನನ್ನ ಮಗನಿಗೆ ಕರೆ ಮಾಡಿ ವಿಚಾರ ತಿಳಿಸಿದೆ' ಎಂದು ತಿಳಿಸಿದರು.
ಓದಿ: ವರ್ತೂರು ಪ್ರಕಾಶ್ ಅಪಹರಣ ಪ್ರಕರಣ: ತನಿಖೆ ಚುರುಕು
ಆರೋಪಿಗಳು ನನಗೆ ಜೀವ ಬೆದರಿಕೆ ಹಾಕಿದ್ದಾರೆ. ನೀನು ದೂರು ನೀಡಿ, ಎಫ್ಐಆರ್ ದಾಖಲಿಸಿದರೆ, ನಾವು ಒಂದು ದಿನ ಜೈಲಿನಲ್ಲಿ ಇರುತ್ತೇವೆ. ಆಮೇಲೆ ಮತ್ತೆ ತೊಂದರೆ ನೀಡುತ್ತೇವೆ ಎಂದು ಬೆದರಿಕೆ ಹಾಕಿರುವುದಾಗಿ ಎಂದು ಮಾಧ್ಯಮದ ಮುಂದೆ ಘಟನೆಯನ್ನು ವಿವರಿಸಿದರು.
ಈ ಕುರಿತು ವೈಟ್ ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಆರೋಪಿಗಳನ್ನು ಪೊಲೀಸರು ಆದಷ್ಟು ಬೇಗ ಬಂಧಿಸುವ ಭರವಸೆ ಇದೆ ಎಂದರು.