ಬೆಂಗಳೂರು : ಬೆಂಗಳೂರಿನಲ್ಲಿರುವ ಯುವಿಇಸಿ ಕಾಲೇಜನ್ನು 'ಯೂನಿವರ್ಸಿಟಿ ಆಫ್ ಎಮಿನೆನ್ಸ್' ಮಟ್ಟಕ್ಕೆ ಉನ್ನತೀಕರಿಸಲಾಗುತ್ತಿದೆ. ಇದು ವಾಜಪೇಯಿಯವರು ಕಂಡಂತಹ ಕನಸಿಗೆ ಪೂರಕವಾಗಿದೆ. ಹಾಗೆಯೇ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದಾದರೂ ವಿಶ್ವವಿದ್ಯಾಲಯ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ತಂತ್ರಜ್ಞಾನದ ಮೂಲಕ ಸರ್ಕಾರವನ್ನು ಜನರ ಬಳಿಗೆ ಕೊಂಡೊಯ್ಯುವುದೇ ಉತ್ತಮ ಆಡಳಿತದ ಲಕ್ಷಣ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ತಿಳಿಸಿದರು.
ವಾಜಪೇಯಿಯವರ 97ನೇ ಜನ್ಮದಿನದ ಅಂಗವಾಗಿ ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಗಳು ಜೊತೆಗೂಡಿ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ 'ಉತ್ತಮ ಆಡಳಿತ ದಿವಸ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಟಲ್ ಬಿಹಾರಿ ವಾಜಪೇಯಿಯವರ ಆಶಯದಂತೆ ರಾಜ್ಯದಲ್ಲಿ ಆಧುನಿಕ ತಂತ್ರಜ್ಞಾನಗಳ ಮೂಲಕ ಸರ್ಕಾರದ ಸೇವೆಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸಲಾಗುತ್ತಿದೆ.
ಉನ್ನತ ಶಿಕ್ಷಣವನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಸಿಗುವಂತೆ ಮಾಡಲಾಗಿದೆ. ಇನ್ನೊಂದೆಡೆ, ಇದೇ ತಂತ್ರಜ್ಞಾನ ಬಳಸಿಕೊಂಡು ಕೌಶಲ್ಯಗಳನ್ನು ಕಲ್ಪಿಸಲಾಗುತ್ತಿದೆ. ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಅತ್ಯುತ್ತಮ ಸಂಸ್ಥೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ವಿವರಿಸಿದರು.
ಭಾರತದಲ್ಲಿ ಆಗಿರುವಷ್ಟು ಡಿಜಿಟಲೀಕರಣ ಮುಂದುವರಿದ ದೇಶಗಳಲ್ಲೂ ಆಗಿಲ್ಲ. ವಿಶಿಷ್ಟ ಗುರುತಿನ ಪ್ರಾಧಿಕಾರವು ತಂತ್ರಜ್ಞಾನವನ್ನು ಬಳಸಿಕೊಂಡು ಜನರ ಖಾತೆಗಳಿಗೆ ನೇರವಾಗಿ ಅನುಕೂಲಗಳನ್ನು ತಲುಪಿಸುತ್ತಿದೆ. ಬ್ಯಾಂಕ್ ಖಾತೆ ತೆಗೆಯುವುದರಿಂದ ಹಿಡಿದು ಅಡುಗೆ ಅನಿಲ ಪೂರೈಕೆವರೆಗೆ ಇವತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಉತ್ತಮ ಆಡಳಿತ’ದ ಹೆಗ್ಗುರುತು ಎಂದು ಅವರು ಪ್ರತಿಪಾದಿಸಿದರು.
ವಾಜಪೇಯಿಯವರ ಪರಿಕಲ್ಪನೆಗಳಾದ ಗ್ರಾಮ ಸಡಕ್ನಿಂದ ಹಿಡಿದು ನದಿ ಜೋಡಣೆಯವರೆಗೆ ಹತ್ತು ಹಲವು ಸಂಗತಿಗಳು ಇಂದು ದೇಶವನ್ನು ಮುನ್ನಡೆಸುತ್ತಿವೆ. ಮೋದಿ ಕೂಡ ನೂರಾರು ಅಪ್ರಸ್ತುತ ಕಾನೂನುಗಳನ್ನು ರದ್ದುಪಡಿಸಿದ್ದು, ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತಂದಿದ್ದಾರೆ ಎಂದು ಅಭಿಪ್ರಾಯಪಟ್ಟರು.
MES ವಿರುದ್ಧ ಕ್ರಮ : ಬೆಳಗಾವಿ ವಿಚಾರದಲ್ಲಿ ಉದ್ಧಟತನ ತೋರಿಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ವತಃ ಮುಖ್ಯಮಂತ್ರಿಗಳು ಸದನದಲ್ಲೇ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಕನ್ನಡಪರ ಸಂಘಟನೆಗಳು ನೀಡಿರುವ ಡಿಸೆಂಬರ್ 31ರ ಕರ್ನಾಟಕ ಬಂದ್ ಕರೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದ ನೆಲ, ಜಲ ಮತ್ತು ನುಡಿಯ ವಿಚಾರಗಳಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಕನ್ನಡಪರ ಸಂಘಟನೆಗಳ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲಿದೆ. ರಾಜ್ಯದಲ್ಲಿ ಬಂದ್ ಆಚರಣೆ ಮಾಡುವುದರಿಂದ ಜನರಿಗೆ ತೊಂದರೆಯಾಗುತ್ತದೆ. ಜೊತೆಗೆ ಆರ್ಥಿಕ ಚಟುವಟಿಕೆಗಳಿಗೆ ಧಕ್ಕೆಯಾಗಲಿದೆ. ಸರ್ಕಾರವು ಕನ್ನಡಪರ ಸಂಘಟನೆಗಳ ಜೊತೆಗೆ ಮಾತುಕತೆಗೆ ಸಿದ್ಧವಿದೆ. ಬೆಳಗಾವಿಯಲ್ಲಿ ದುಷ್ಕೃತ್ಯ ನಡೆಸಿದವರನ್ನು ಈಗಾಗಲೇ ಬಂಧಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಾಜಪೇಯಿ ಶ್ರೇಷ್ಠ ಮುತ್ಸದಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಭಾರತವನ್ನು ಜಗತ್ತೇ ಗುರುತಿಸುವ ಸ್ಥಾನಕ್ಕೆ ಕೊಂಡೊಯ್ದ ಶ್ರೇಷ್ಠ ಮುತ್ಸದಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸ್ಮರಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ದೇಶದ ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಜಪೇಯಿ ಅವರು ಒಬ್ಬ ಸ್ವಯಂಸೇವಕ, ಪ್ರಚಾರಕ ನಂತರದ ದಿನಗಳಲ್ಲಿ ಲೋಕಸಭಾ ಸದಸ್ಯರಾಗಿ, ವಿರೋಧ ಪಕ್ಷದ ನಾಯಕ, ಪ್ರಧಾನಿಯಾಗಿ ಪ್ರತಿನಿತ್ಯ ಭಾರತವನ್ನು ಆರಾಧಿಸಿದವರು ಎಂದು ನುಡಿದರು.
ಕಳಂಕ ಇಲ್ಲದ, ಭ್ರಷ್ಟಾಚಾರರಹಿತ ಆಡಳಿತವನ್ನು ನೀಡಿದವರು. ಭಾರತವನ್ನು ಮೊದಲ ಬಾರಿಗೆ ಅವರು ಸಾಲಮುಕ್ತ ರಾಷ್ಟ್ರವನ್ನಾಗಿ ಮಾಡಿದರು. ಪೋಖ್ರಾನ್ ಅಣು ಬಾಂಬ್ ಸ್ಫೋಟದ ಮೂಲಕ ಜಗತ್ತಿಗೆ ನಮ್ಮ ಸೈನ್ಯದ ಶಕ್ತಿಯನ್ನು ಪರಿಚಯಿಸಿದರು. ಸ್ವಾಭಿಮಾನಿ ರಾಷ್ಟ್ರ ನಿರ್ಮಿಸಿದವರು ಎಂದು ವಿವರಿಸಿದರು.
ವಾಜಪೇಯಿ ಯುವಕರಾಗಿದ್ದಾಗಲೇ ಅವರು ಮುಂದಿನ ದಿನಗಳಲ್ಲಿ ಪ್ರಧಾನಿ ಆಗಲಿದ್ದಾರೆ ಎಂದು ನೆಹರೂ ತಿಳಿಸಿದ್ದರು. ವಾಜಪೇಯಿ ಅವರ ಜೀವನಶೈಲಿ, ಸಂಘಟನಾ ಚಾತುರ್ಯವು ಕಾರ್ಯಕರ್ತರಿಗೆ ಪ್ರೇರಣೆ ನೀಡುವಂತಿತ್ತು. ಅವರು ತಮ್ಮ ಕವಿತೆಗಳ ಮೂಲಕ ಭಾರತೀಯರ ಹೃದಯದಲ್ಲಿ ರಾಷ್ಟ್ರಭಕ್ತಿಯ ಉದ್ದೀಪನ ಮಾಡಿದ್ದರು ಎಂದು ತಿಳಿಸಿದರು.
ಅವರ ಆಡಳಿತವು ಮಾದರಿ ಎನಿಸುವಂಥದ್ದು. ಇಂದು ಸುಶಾಸನ ದಿನವನ್ನೂ ಆಚರಿಸಲಾಗುತ್ತಿದೆ. ಅವರ ಆದರ್ಶದಲ್ಲಿ ನರೇಂದ್ರ ಮೋದಿಯವರು ಕಳೆದ ಏಳೂವರೆ ವರ್ಷಗಳಲ್ಲಿ ಭ್ರಷ್ಟಾಚಾರ ಇಲ್ಲದ ಮತ್ತು ಕಳಂಕಮುಕ್ತ ಆಡಳಿತ ನೀಡಿದ್ದಾರೆ, ಅಟಲ್‌ಜಿ ಅವರ ಸಂಕಲ್ಪವನ್ನು ನನಸಾಗಿಸಲು ಅವರು ಶ್ರಮಿಸುತ್ತಿದ್ದಾರೆ ಎಂದರು.