ಬೆಂಗಳೂರು: ವೈಕುಂಠ ಏಕಾದಶಿ ಪ್ರಯುಕ್ತ ನಗರದ ಇಸ್ಕಾನ್ ದೇವಾಲಯ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದ್ದು, ಮುಂಜಾನೆ 6.15ಕ್ಕೆ ವೈಕುಂಠ ದ್ವಾರಕ್ಕೆ ವಿಶೇಷ ಪೂಜೆ ಸಲ್ಲಿಸಿ ಬಾಗಿಲು ತೆರೆಯಲಾಯಿತು.
ವೈಕುಂಠ ಏಕದಶಿ ಹಿನ್ನಲ್ಲೆಯಲ್ಲಿ ಮಧ್ಯರಾತ್ರಿಯವರೆಗೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ ಶಾಸಕ ಗೋಪಾಲಯ್ಯ ಹಾಗೂ ಪತ್ನಿ ಹೇಮಲತಾ ದಂಪತಿ ಸಮೇತವಾಗಿ ಆಗಮಿಸಿದರು. ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು.
ನಗರದ ಚಾಮರಾಜಪೇಟೆ ಬಳಿಯ ಕೋಟೆ ವೆಂಕಟರಮಣ ದೇವಸ್ಥಾನದಲ್ಲೂ ವಿಶೇಷ ಪೂಜೆ ಸಲ್ಲಿಸಲಾಯಿತು. ವೈಕುಂಠ ಏಕಾದಶಿಯು ಶುಕ್ಲಾಪಕ್ಷದಲ್ಲಿ ಬರುವ ವಿಶೇಷ ಏಕಾದಶಿ ಆಗಿದ್ದು, ಈ ದಿನ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ಪ್ರತೀತಿಯಿದೆ. ಈ ದಿನ ವೆಂಕಟರಮಣನ ದರ್ಶನ ಪಡೆದರೆ, ಪಾಪಗಳೆಲ್ಲ ನಿವಾರಣೆಯಾಗಿ ಮೋಕ್ಷ ಪ್ರಾಪ್ತಿಯಾಗುವುದೆಂಬ ನಂಬಿಕೆ ಹಿಂದಿನಿಂದಲೂ ಇದೆ. ಹೀಗಾಗಿ, ಸೋಮವಾರ ಮುಂಜಾನೆಯಿಂದ ರಾತ್ರಿಯವರೆಗೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.