ಬೆಂಗಳೂರು: ವೀಕೆಂಡ್ ಕರ್ಫ್ಯೂ ನಾಳೆ ಬೆಳಗ್ಗೆ 6 ಗಂಟೆಗೆ ಮುಕ್ತಾಯಗೊಳ್ಳಲಿದೆ. ಈಗಾಗಲೇ ಹೊರಡಿಸಿರುವ ಮಾರ್ಗಸೂಚಿಯಂತೆ ನಾಳೆಯಿಂದ ನೈಟ್ ಕರ್ಫ್ಯೂ ಇರಲಿದೆ. ಹಗಲಿನಲ್ಲಿ ಅನುಮತಿಸಿದ ಸೇವೆಗಳಿಗಷ್ಟೇ ಅವಕಾಶವಿರಲಿದೆ. ಇಡೀ ದಿನ ಅಗತ್ಯ ಸೇವೆ ಸಿಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯಿಂದ ವೀಕ್ ಡೇಸ್ ಮಾರ್ಗಸೂಚಿ ಯಥಾ ಪ್ರಕಾರ ಜಾರಿಯಲ್ಲಿರಲಿದೆ. ಕೈಗಾರಿಕೆಗಳು ಆರಂಭಗೊಳ್ಳಲಿವೆ, ನಿರ್ಮಾಣ ಕಟ್ಟಡ ಕಾರ್ಮಿಕರ ಕೆಲಸಗಳೂ ಆರಂಭಗೊಳ್ಳಲಿವೆ. ಉಳಿದಂತೆ ಕಿರಾಣಿ ಅಂಗಡಿ, ಆಹಾರೋತ್ಪನ್ನಗಳ ಪಾರ್ಸಲ್ ಸೇವೆ, ಹಾಲು, ತರಕಾರಿ, ಸೆಲೂನ್, ಔಷಧಿ ಅಂಗಡಿ ಮಾತ್ರ ತೆರೆಯಲಿವೆ. ಈಗಾಗಲೇ ಹೊರಡಿಸಿದ ಮಾರ್ಗಸೂಚಿಯಲ್ಲಿ ಅನುಮತಿಸಿದ ಸೇವೆಗಳಿಗೆ ಮಾತ್ರ ಅವಕಾಶವಿದ್ದು, ನಿರ್ಬಂಧಿಸಿದ ಸೇವೆಗಳಿಗೆ ಅವಕಾಶವಿರುವುದಿಲ್ಲ. ಜನರೂ ನಮಗೆ ಸಹಕಾರ ನೀಡಬೇಕು, ಅನಗತ್ಯವಾಗಿ ಯಾರೂ ಓಡಾಡಬಾರದು ಎಂದು ಮನವಿ ಮಾಡಿದರು.
ಬೆಂಗಳೂರಿಗೆ ಪ್ರತ್ಯೇಕ ನಿಯಮ:
ಬೆಂಗಳೂರಿಗೆ ಪ್ರತ್ಯೇಕ ನಿಯಮ ಜಾರಿ ವಿಚಾರ ಕುರಿತು ನಿನ್ನೆಯೂ ಚರ್ಚೆ ಆಗಿದೆ. ಆದರೆ ಸದ್ಯಕ್ಕೆ ಈಗಿರುವ ಮಾರ್ಗಸೂಚಿಗಳೇ ಜಾರಿಯಲ್ಲಿರಲಿವೆ. ಮುಂದೆ ಪರಿಸ್ಥಿತಿ ನೋಡಿಕೊಂಡು ಚರ್ಚೆ ಮಾಡುತ್ತೇವೆ. 14 ದಿನ ಚೈನ್ ಲಿಂಕ್ ಕಟ್ ಡೌನ್ ಮಾಡಬೇಕಿದೆ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಇರಲಿದೆ ಎಂದರು.
ತಾವರೆಕೆರೆಯಲ್ಲಿ ಶವಸಂಸ್ಕಾರಕ್ಕೆ ಕಾಯಬೇಕಾದ ಸ್ಥಿತಿ ಇದೆ. ಆದರೆ ನಾಳೆಯಿಂದ ಶವಸಂಸ್ಕಾರಕ್ಕೆ ಕಾಯಬೇಕಿಲ್ಲ, ಮೃತದೇಹವನ್ನು ತಂದ ಕೂಡಲೇ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಡುವ ವ್ಯವಸ್ಥೆಯನ್ನು ಕಂದಾಯ ಇಲಾಖೆ ಮಾಡಿದೆ. ತಾವರೆಕೆರೆ ಚಿತಾಗಾರಕ್ಕೆ ಭೇಟಿ ನೀಡಿದ್ದು, ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಫಾರೆಸ್ಟ್ ಡಿಪಾರ್ಟ್ಮೆಂಟ್ನಿಂದ ಸೌದೆ ಒದಗಿಸಿದ್ದಾರೆ. ಒರುವ ಆ್ಯಂಬುಲೆನ್ಸ್‌ಗಳಿಗೆ ಜಾಗ ಮಾಡಲಾಗಿದೆ. ಶವದ ಜೊತೆ ಬಂದವರಿಗೆ ಕೂರಲು ಶಾಮಿಯಾನ್ ವ್ಯವಸ್ಥೆ ಮಾಡಲಾಗಿದೆ. ಕುಟೀರ ವ್ಯವಸ್ಥೆ ಆಗಿದೆ. ತಾವರೆಕೆರೆ ಬಳಿಯೇ ಮತ್ತೊಂದು ಚಿತಾಗಾರ ಸಿದ್ಧವಾಗುತ್ತಿದೆ. ಅಲ್ಲೂ 40 ಶವಗಳನ್ನು ಸುಡಲು ವ್ಯವಸ್ಥೆ ಮಾಡುತ್ತೇವೆ. ಆ್ಯಂಬುಲೆನ್ಸ್ನವರು ಹಣ ಪೀಕುವ ದಂಧೆಗೆ ಕಡಿವಾಣ ಹಾಕುತ್ತೇವೆ ಎಂದು ತಿಳಿಸಿದರು.
ನಾಳೆ ಕ್ಯಾಬಿನೆಟ್ನಲ್ಲಿ ನಿರ್ಧಾರ:
ನಾಳೆ ಸಚಿವ ಸಂಪುಟ ಸಭೆ ಇದೆ. ಇಡೀ ದೇಶದಲ್ಲಿ ಲಸಿಕೆ ಅಭಿಯಾನ ನಡೆಯುತ್ತಿದ್ದು, ಲಸಿಕೆ ಕೊಡುವ ವ್ಯವಸ್ಥೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ನಮ್ಮ ರಾಜ್ಯದಲ್ಲಿ ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಯಾವ ರೀತಿ ಲಸಿಕೆ ನೀಡಬೇಕು ಎನ್ನುವ ಕುರಿತು ಸಿಎಂ ತೀರ್ಮಾನ ಮಾಡಲಿದ್ದಾರೆ. ರಾಜ್ಯದ ಜನತೆ ಬೆಂಗಳೂರು, ಕಲಬುರಗಿ ಸೇರಿದಂತೆ ಸೋಂಕಿತರು ಹೆಚ್ಚಿರುವ ಜಿಲ್ಲೆಗಳ ಜನರು ಸಹಕರಿಸಬೇಕು. ನಾಳೆ ಕ್ಯಾಬಿನೆಟ್ ಬಳಿಕ ನಿರ್ಧಾರವನ್ನ ಪ್ರಕಟಿಸುತ್ತೇವೆ ಎಂದು ಸಚಿವರು ಹೇಳಿದ್ರು.