ಬೆಂಗಳೂರು ಗ್ರಾಮಾಂತರ: ಬಿಹಾರ ಮತ್ತು ಉತ್ತರಪ್ರದೇಶದ 3 ಸಾವಿರಕ್ಕೂ ಹೆಚ್ಚು ವಲಸಿಗರನ್ನ ನೆಲಮಂಗಲ ಬಳಿಯ ಬಿಐಇಸಿಯಲ್ಲಿ ( ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನ) ಥರ್ಮಲ್ ಸ್ಕ್ರೀನಿಂಗ್ ಒಳಪಡಿಸಲಾಗಿದ್ದು, ಅದರಲ್ಲಿ11 ಜನರಿಗೆ ಕೊರೊನಾ ಶಂಕೆ ವ್ಯಕ್ತವಾಗಿದೆ.
ಕೊರೊನಾ ವೈರಸ್ ಭೀತಿ ಹಿನ್ನೆಲೆ, ಕರ್ನಾಟಕದ ವಿವಿಧ ಭಾಗಗಳಿಗೆ ಕೆಲಸಕ್ಕೆಂದು ಆಗಮಿಸಿದ ವಲಸಿಗರನ್ನ ರೈಲುಗಳ ಮೂಲಕ ಆಯಾ ರಾಜ್ಯಗಳಿಗೆ ಕಳಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಅದಕ್ಕೂ ಮುನ್ನ ವಲಸಿಗರನ್ನ ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಲು ನೆಲಮಂಗಲದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸುಮಾರು 3,000 ಮಂದಿಯನ್ನ ಇಂದಿನಿಂದ ತಪಾಸಣೆ ನಡೆಸಲಾಗಿದ್ದು,ಥರ್ಮಲ್ ಸ್ಕ್ರೀನಿಂಗ್ ವೇಳೆ 11 ಜನರ ದೇಹದ ತಾಪಮಾನ ಹೆಚ್ಚಿರುವುದು ಕಂಡುಬಂದಿದೆ. 11 ಜನರ ಸಂಪರ್ಕದಲ್ಲಿ ಸುಮಾರು 3,000ಕ್ಕೂ ಹೆಚ್ಚು ಮಂದಿ ಬಿಹಾರಿ ಹಾಗೂ ಉತ್ತರಪ್ರದೇಶದವರು ಇರುವುದು ಆತಂಕಕ್ಕೆ ಕಾರಣವಾಗಿದೆ.
ಬಿಐಇಸಿ ಬಳಿ ಬಂದೋಬಸ್ತ್‌ಗಾಗಿ 5 ಜಿಲ್ಲೆಯ ಪೊಲೀಸರು ಹಾಗೂ ಕೆಎಸ್‌ಆರ್‌ಪಿ ತುಕಡಿಗಳನ್ನ ನಿಯೋಜನೆ ಮಾಡಲಾಗಿದೆ. ನೂರಕ್ಕೂ ಹೆಚ್ಚು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ನಡೆಸುತ್ತಿದ್ದಾರೆ. ಸಚಿವ ಆರ್.ಅಶೋಕ್ ಹಾಗೂ ಕಮಿಷನರ್ ಭಾಸ್ಕರ್ ರಾವ್ ಸಹ ಬಿಐಇಸಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.