ಯಲಹಂಕ : ಹಗಲು ಹೊತ್ತಿನಲ್ಲಿ ಯಾರೂ ಇಲ್ಲದ ಮನೆಗಳಿಗೆ ನುಗ್ಗಿ ಚಿನ್ನಾಭರಣ ಮತ್ತು ನಗದು ಕದಿಯುತ್ತಿದ್ದ ಕಳ್ಳತನದ ಆರೋಪಿಯನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಮಹಿಳೆಯನ್ನು ಜಯಂತಿ ಕಾವಲ್ ಅಲಿಯಾಸ್ ಕುಟ್ಟಿಯಮ್ಮ(31) ಎಂದು ಗುರುತಿಸಲಾಗಿದೆ. ಆರೋಪಿಯಿಂದ 75 ಗ್ರಾಂ ಚಿನ್ನಾಭರಣ ಮತ್ತು 638 ಗ್ರಾಂ ಬೆಳ್ಳಿ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಹಿಂದೆ ಯಲಹಂಕ ಬಳಿಯ ವಿದ್ಯಾರಣ್ಯಪುರದ ಬೈರಪ್ಪ ಗಾರ್ಡನ್ ನ ಪ್ರಭಾಕರ್ ಎಂಬುವರ ಮನೆಯಲ್ಲಿ 71.5 ಗ್ರಾಂ ಚಿನ್ನಾಭರಣ ಮತ್ತು ಎಎಮ್ ಎಸ್ ಲೇಔಟ್ ನ ಪ್ರಕಾಶ್ ಎಂಬುವರ ಮನೆಯಲ್ಲಿ 12 ಗ್ರಾಂ ಚಿನ್ನ, 1.5 ಕೆಜಿ ಬೆಳ್ಳಿ ವಸ್ತುಗಳು, 8 ಸಾವಿರ ನಗದು ಕಳ್ಳತನವಾಗಿತ್ತು. ಈ ಬಗ್ಗೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಕಾರ್ಯಾಚರಣೆಗಿಳಿದ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಬಂಧಿತಳಿಂದ ಸುಮಾರು 75 ಗ್ರಾಂ ಚಿನ್ನಾಭರಣ, 638 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಆರೋಪಿ ಜಯಂತಿ ಕಾವಲ್ ಬೈರಸಂಧ್ರ ನಿವಾಸಿಯಾಗಿದ್ದು, ಕಳ್ಳತನದಲ್ಲಿ ತೊಡಗಿದ್ದಳು. ಈಕೆಯ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 23 ಪ್ರಕರಣಗಳು ದಾಖಲಾಗಿವೆ. ಸದ್ಯ ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಓದಿ: ರಾಶಿ ಭವಿಷ್ಯ ಸರಿಯಿಲ್ಲ ಎಂದು ಕರುಳ ಕುಡಿಯನ್ನೇ ನದಿಗೆ ಎಸೆದು ಕೊಂದ ತಾಯಿ!