ಬೆಂಗಳೂರು: ಕಳ್ಳತನವನ್ನೇ ಕಾಯಕ ಮಾಡಿಕೊಂಡು ಪದೇ ಪದೇ ಜೈಲಿಗೆ ಹೋಗಿಬಂದರೂ ಬುದ್ಧಿ ಕಲಿಯದ ಚೋರನನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಗಾರಪೇಟೆ ಮೂಲದ ಸಯ್ಯದ್ ಅಜ್ಮದ್ ಬಂಧಿತ. ಈತನಿಂದ ₹2 ಲಕ್ಷ ಮೌಲ್ಯದ 407 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಫಿಂಗರ್‌ಪ್ರಿಂಟ್ ಆಧಾರದ ಮೇಲೆ ಖದೀಮ ಅರೆಸ್ಟ್:
ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯ ಮನೆಯೊಂದರಲ್ಲಿ ನಾಗರತ್ನಮ್ಮ ಎಂಬುವವರು ವಾಸವಾಗಿದ್ದರು. ಕಳೆದ ತಿಂಗಳು (ಅ.26) ಮಗನ ಜೊತೆ ತರಕಾರಿ ತರಲು ಮನೆಗೆ ಬೀಗ ಹಾಕಿಕೊಂಡು ತೆರಳಿದ್ದರು. ಈ ವೇಳೆ ಹಾಡಹಾಗಲೇ ಮನೆಗೆ ನುಗ್ಗಿದ ಸಯ್ಯದ್ ಅಜ್ಮದ್, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಸಂಬಂಧ ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಲಕ್ಷ್ಮಣ್ ನಾಯಕ್ ಹಾಗೂ ಸಬ್ ಇನ್ಸ್ಪೆಕ್ಟರ್ ಸಂಗಬಸಪ್ಪ ರಬಕವಿ ನೇತೃತ್ವದ ತಂಡ ಫಿಂಗರ್ ಪ್ರಿಂಟ್ ಸುಳಿವಿನಿಂದ ಹಾಗೂ ಸೆರೆಯಾದ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯ ಹೆಡೆಮುರಿಕಟ್ಟಿದ್ದಾರೆ.
ದುಬೈ ವ್ಯಾಪಾರಿ ಸೋಗಿನಲ್ಲಿ ಕದ್ದ ಮಾಲು ಮಾರಾಟ:
ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಈತ ಬಾಗಿಲು ಹಾಕಿದ ಮನೆಗಳನ್ನೇ ಗುರುತಿಸಿಕೊಂಡು ಮನೆ ಕದ ತಟ್ಟುತ್ತಿದ್ದ. ಮನೆಯೊಳಗೆ ಯಾರೂ ಇಲ್ಲದಿರುವುದನ್ನು ಖಾತ್ರಿಪಡಿಸಿಕೊಂಡ ಬಳಿಕ ಬೀಗ ಒಡೆದು ಮನೆಗೆ ನುಗ್ಗುತ್ತಿದ್ದ. ಕದ್ದ ಚಿನ್ನಾಭರಣಗಳನ್ನು ಪರಿಚಯಸ್ಥರ ಆಭರಣದಂಗಡಿಯಲ್ಲಿ ಮಾರಾಟ ಮಾಡುತ್ತಿದ್ದ.
ದುಬೈನಲ್ಲಿ ಕೆಲಸ ಮಾಡುತ್ತಿದ್ದೇನೆ, ವ್ಯವಹಾರದಲ್ಲಿ ನಷ್ಟ ಹೊಂದಿರುವುದರಿಂದ ಆಭರಣಗಳನ್ನು ಮಾರಾಟ ಮಾಡುತ್ತಿದ್ದೇನೆ ಎಂದು ಯಾಮಾರಿಸಿ, ಕದ್ದ ಮಾಲನ್ನು ಮಾರಿ ಹಣ ಪಡೆದುಕೊಳ್ಳುತ್ತಿದ್ದ.
19 ಪ್ರಕರಣಗಳಲ್ಲಿ ಬೇಕಿದ್ದ ಆರೋಪಿ:
ಈತನನ್ನು ಕುಂಬಳಗೋಡು ಠಾಣಾ ಪೊಲೀಸರು ಕೊಲೆ ಪ್ರಕರಣದಲ್ಲಿ 2016ರಲ್ಲಿ ಬಂಧಿಸಿದ್ದರು. 2020 ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದ. ಉಪ್ಪಾರಪೇಟೆ, ಜ್ಞಾನಭಾರತಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ 19 ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ರಸ್ತೆ ತಿರುವಿನಲ್ಲಿ ಮಹಿಳೆ ಮೇಲೆ ಹರಿದ ಬಸ್: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ