ಬೆಂಗಳೂರು: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಲಾಕ್ಡೌನ್ ಘೋಷಿಸಲಾಗಿದ್ದು, ಅದು ರಾಜ್ಯದಲ್ಲಿ ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿಲ್ಲ ಎನ್ನುವುದಕ್ಕೆ ಬೆಂಗಳೂರು ಮಹಾನಗರ ಸಾಕ್ಷಿಯಾಗುತ್ತಿದೆ. ಲಾಕ್ಡೌನ್ ಘೋಷಣೆಯಾದಾಗಿನಿಂದ ಇಲ್ಲಿಯವರೆಗೂ ಸಂಪೂರ್ಣ ಬೆಂಬಲ ಸಿಕ್ಕಿಲ್ಲ. ಹೀಗಾಗಿ ಮನೆಯಿಂದ ಹೊರ ಬಂದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಇದು ದೊಡ್ಡ ಪ್ರಮಾಣದಲ್ಲಿ ಸುದ್ದಿಯಾಯಿತು.
ಅಷ್ಟೊಂದು ಕಟ್ಟುನಿಟ್ಟಾಗಿ ನಿಯಮ ಪಾಲನೆ ಬೇಡ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದರು. ಈ ಹೇಳಿಕೆ ಜನ ದೊಡ್ಡ ಸಂಖ್ಯೆಯಲ್ಲಿ ರಸ್ತೆಗಿಳಿಯಲು ಅವಕಾಶ ಮಾಡಿಕೊಟ್ಟಂತಾಯಿತು. ಇದು ಬಿಜೆಪಿ ಹೈಕಮಾಂಡ್ ಸಿಟ್ಟಿಗೆ ಕಾರಣವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಖುದ್ದು ರಾಜ್ಯದ ಲಾಕ್ಡೌನ್ ವೈಫಲ್ಯದ ವಿರುದ್ಧ ಕಿಡಿಕಾರಿದ್ದಾರೆ.
ಇಲ್ಲಿ ನಿಯಮ ಸೂಕ್ತವಾಗಿ ಜಾರಿಯಾಗಿಲ್ಲ. ಜನ ಬೇಕಾಬಿಟ್ಟಿ ರಸ್ತೆಯಲ್ಲಿ ಅಲೆಯುತ್ತಿದ್ದಾರೆ. ನಿಮ್ಮಿಂದ ನಿಯಂತ್ರಣ ಸಾಧ್ಯವಾಗದಿದ್ದರೆ ಸೇನೆಯ ಸಹಕಾರ ಪಡೆಯಿರಿ ಎಂದು ಸಲಹೆ ನೀಡಿದ್ದಾರೆ. ಅದಕ್ಕಾಗಿ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಕೊಂಚ ಕಠಿಣ ಕ್ರಮಕ್ಕೆ ಮುಂದಾಗಿದೆ. ಅನಗತ್ಯವಾಗಿ ಓಡಾಡುವ ವಾಹನ ಚಾಲಕರನ್ನು ಬಂಧಿಸಿ ಹೋಮ್ ಕ್ವಾರಂಟೈನ್ನಲ್ಲಿ ಇರಿಸುವ ತೀರ್ಮಾನಕ್ಕೆ ಬಂದಿದೆ. ವಾಹನಗಳನ್ನು ವಶಕ್ಕೆ ಪಡೆಯುವಂತೆ ಸೂಚಿಸಿದೆ.
ಸದ್ಯದ ಮಟ್ಟಿಗೆ ಬೆಳಗ್ಗೆ 10 ಗಂಟೆಯವರೆಗೆ ಹಾಗೂ ಸಂಜೆ 6ರ ನಂತರ ಒಂದಿಷ್ಟು ವಾಹನಗಳು ಓಡಾಡುತ್ತಿವೆ. ಈಗ ಅದನ್ನೂ ನಿಯಂತ್ರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಷ್ಟಾದರೂ ಜನ ಮಾತು ಕೇಳದಿದ್ದರೆ ರಾಜ್ಯಕ್ಕೆ ಸೇನೆ ಅಥವಾ ಅರೆಸೇನಾ ಪಡೆಯನ್ನು ಕರೆಸಿಕೊಳ್ಳುವ ಸಾಧ್ಯತೆ ಇದೆ. ಸೇನೆ ಒಮ್ಮೆ ರಸ್ತೆಗಿಳಿದರೆ ಲಾಕ್ಡೌನ್ ಪರಿಣಾಮ ಮತ್ತೊಂದು ಮಗ್ಗುಲಿಗೆ ಹೋಗಲಿದೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ಲಾಕ್ಡೌನ್ ಸ್ಪಂದನೆ ಆಧರಿಸಿ ಸೇನೆ ಇಳಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ದೇಶದ ವಿವಿಧ ರಾಜ್ಯಗಳಿಗೆ ಅರೆಸೇನಾ ಪಡೆ ಕಳುಹಿಸುವ ಸಿದ್ಧತೆ ಕೇಂದ್ರ ಸರ್ಕಾರ ನಡೆಸಿದೆ. ಇದರಲ್ಲಿ ಕರ್ನಾಟಕದ ಹೆಸರೂ ಮೇಲ್ಪಂಕ್ತಿಯಲ್ಲಿದೆ. ಹೀಗಾಗಿ ಕೇಂದ್ರ ಸರ್ಕಾರ ಇನ್ನೆರಡು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಹೋಮ್ ಕ್ವಾರಂಟೈನ್ ಸಂಖ್ಯೆ ಹೆಚ್ಚಿರುವ ಬೆಂಗಳೂರು, ತುಮಕೂರು, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಿಗೆ ಮೊದಲ ಹಂತದಲ್ಲಿ ಅರೆಸೇನಾ ಪಡೆ ನಿಯೋಜಿಸುವ ಸಾಧ್ಯತೆ ಇದೆ.