ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಶೇ 50ರಷ್ಟು ಸೀಟುಗಳನ್ನು ಸರ್ಕಾರಕ್ಕಾಗಿ ಮೀಸಲಿಡಬೇಕು ಎಂಬ ಆದೇಶವೇ ಪಾಲನೆ ಆಗುತ್ತಿಲ್ಲ. ಈ ನಡುವೆ ಸರ್ಕಾರ ಮತ್ತೊಂದು ಆದೇಶ ಹೊರಡಿಸಿರುವುದು ಸರಿ ಪಾಲನೆ ಆಗುವುದು ಯಾವಾಗ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಬೆಡ್ ಗಳನ್ನು ಕೋವಿಡ್ ಸೋಂಕಿತರಿಗಾಗಿ ಸರ್ಕಾರಕ್ಕೆ ಮೀಸಲಿಡಬೇಕು ಎಂದು ಮಾಡಲಾಗಿದ್ದ ಆದೇಶವನ್ನ ರಾಜ್ಯದ ಬಹುತೇಕ ಖಾಸಗಿ ಆಸ್ಪತ್ರೆಗಳು ಪಾಲಿಸುತ್ತಿಲ್ಲ. ಬೆಂಗಳೂರಿನಲ್ಲಂತೂ ಸರ್ಕಾರದ ಆದೇಶಕ್ಕೆ ಖಾಸಗಿ ಆಸ್ಪತ್ರೆಗಳು ಕವಡೆ ಕಾಸಿನ ಕಿಮ್ಮತ್ತೂ ನೀಡುತ್ತಿಲ್ಲ. ಇಂಥ ಸಂದರ್ಭದಲ್ಲಿ ಶೇ.75 ರಷ್ಟು ಬೆಡ್ ಮೀಸಲಿಡಬೇಕು ಎಂದು ಸರ್ಕಾರ ಹೊಸ ಆದೇಶ ಮಾಡಿದೆ. ಹಳೇ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕಾದ ಸರ್ಕಾರ ಹೊಸ ಆದೇಶ ಮಾಡಿದೆ ಎಂದಿದ್ದಾರೆ.
ಪೇಪರ್ ಟೈಗರ್: ಈ ಬಿಜೆಪಿ ಸರ್ಕಾರ ಪೇಪರ್ ಟೈಗರ್ ಇದ್ದಂತೆ. ಎಲ್ಲ ಆದೇಶಗಳೂ ಕೇವಲ ದಾಖಲೆಗಳಲ್ಲಿ ಮಾತ್ರ ಜಾರಿಯಾಗುತ್ತಿದ್ದು, ವಾಸ್ತವದಲ್ಲಿ ಆಗುವುದಿಲ್ಲ. ಬೆಡ್ ಗಳನ್ನು ಮೀಸಲಿಡದ ಖಾಸಗಿ ಆಸ್ಪತ್ರೆಗಳ ಮೇಲೆ ಕ್ರಮ ಕೈಗೊಳ್ಳಲು ಈ ಸರ್ಕಾರವನ್ನು ತಡೆದಿರುವವರು ಯಾರು? ಖಾಸಗಿಯವರ ಮೇಲೆ ಕ್ರಮ ತೆಗೆದುಕೊಳ್ಳಲು ಹಿಂದೇಟು ಯಾಕೆ.? ಬೆಂಗಳೂರನ್ನೇ ತೆಗೆದುಕೊಳ್ಳುವುದಾದರೆ ನೂರಕ್ಕೂ ಹೆಚ್ಚು ಆಸ್ಪತ್ರೆಗಳು ಇದುವರೆಗೂ ಶೇ.50 ರಷ್ಟು ಬೆಡ್ ಗಳನ್ನ ಸರ್ಕಾರಕ್ಕೆ ಬಿಟ್ಟುಕೊಟ್ಟಿಲ್ಲ. ಇಂಥ ಆಸ್ಪತ್ರೆಗಳ ಮೇಲೆ ಸರ್ಕಾರ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿಗಳೇ ಬಿ ಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್ ಅವರೇ ಸರ್ಕಾರ ಕೇವಲ ಆದೇಶಗಳನ್ನು ಹೊರಡಿಸುವುದಲ್ಲ. ಆದೇಶಗಳು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ನಿಮಗೆ ಸರ್ಕಾರ ನಡೆಸಲು ಬರದಿದ್ದರೆ ಪ್ರತಿಪಕ್ಷದ ನಾಯಕರಿಂದ ಸಲಹೆ ಪಡೆಯಿರಿ ಎಂದು ಸೂಚಿಸಿದ್ದಾರೆ.
ದುರದೃಷ್ಟಕರ ಸಂಗತಿ : ಜಿಂದಾಲ್ ಕಂಪನಿಗೆ 3,667 ಎಕರೆ ಭೂಮಿಯನ್ನು ಮಾರಾಟ ಮಾಡಲು ಬಿಜೆಪಿ ಸರ್ಕಾರದ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಈ ಹಿಂದೆ ಜಿಂದಾಲ್‌ಗೆ ಭೂಮಿ ಮಾರಾಟ ಮಾಡಲು ನಿರ್ಧರಿಸಿದ್ದ ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ನಡೆಸಿತ್ತು. ಆದರೆ ದುರದೃಷ್ಟಕರ ಸಂಗತಿ ಎಂದರೆ ಇಂದು ಬಿಜೆಪಿ ಸರ್ಕಾರ ಅದೇ ಜಿಂದಾಲ್‌ಗೆ ಅದೇ ಭೂಮಿಯನ್ನು ಸದ್ದಿಲ್ಲದೇ ಮಾರಿದೆ. ಪ್ರತಿ ಪಕ್ಷದಲ್ಲಿದ್ದಾಗ ವಿರೋಧಿಸಿದ್ದ ಬಿಜೆಪಿ ಈಗ ಅಧಿಕಾರಕ್ಕೆ ಬಂದಾಗ ಕದ್ದುಮುಚ್ಚಿ ಭೂಮಿ ಮಾರಾಟ ಮಾಡಿದೆ ಎಂದು ಆರೋಪಿಸಿದ್ದಾರೆ.
ಎಕರೆವಾರು ಶುದ್ಧ ಕ್ರಯಕ್ಕೆ ನಿಗದಿ ಮಾಡಿದ ಮೊತ್ತವೆಷ್ಟು ಎಂಬುದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಗೊತ್ತಿಲ್ಲ. ಗೃಹ ಸಚಿವರಿಗೇ ಈ ಬಗ್ಗೆ ಮಾಹಿತಿ ಇಲ್ಲ ಎಂದರೆ ನಂಬಲು ಸಾಧ್ಯವೇ. ಜಿಂದಾಲ್ ಕಂಪನಿಗೆ 3,667 ಎಕರೆ ಭೂಮಿಯನ್ನು ಮಾರಾಟ ಮಾಡಲು ಮುಂದಾಗಿರುವ ಬಿಜೆಪಿ ಸರ್ಕಾರದ ಈ ಇಬ್ಬಗೆ ನೀತಿ ಎಷ್ಟು ಸರಿ ಎಂದು ರಾಜ್ಯದ ಜನ ಪ್ರಶ್ನಿಸುತ್ತಿದ್ದಾರೆ ಎಂದು ಎಸ್ ಆರ್ ಪಾಟೀಲ್ ಹೇಳಿದ್ದಾರೆ.