ಬೆಂಗಳೂರು : ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯ ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ಮುಸ್ಲಿಂ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ಅವರನ್ನು ನೇಮಿಸಿ ಸರ್ಕಾರ 2018ರಲ್ಲಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಆಯುಕ್ತರ ಆದೇಶ ಪ್ರಶ್ನಿಸಿ ದತ್ತಾತ್ರೇಯ ಪೀಠ ದೇವಸ್ಥಾನ ಸಂವಧರ್ನಾ ಸಮಿತಿ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ್ದ ತೀರ್ಪುನ್ನು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರ ಏಕಸದಸ್ಯ ಪೀಠ ಇಂದು ಪ್ರಕಟಿಸಿತು.
ದತ್ತಾತ್ರೇಯ ಪೀಠದಲ್ಲಿನ ಪೂಜಾ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸಿವಿಲ್ ಮೇಲ್ಮನವಿಯ ಸಂಬಂಧ 2010ರ ಮಾ.10ರಂದು ಅಂದಿನ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿ, ನಿತ್ಯ ಪೂಜೆ ನೆರವೇರಿಸಲು ಆಡಳಿತ ಸಮಿತಿಯು ಹಿಂದು ಅರ್ಚಕರೊಬ್ಬರನ್ನು ನೇಮಿಸಬೇಕೆಂದು ತಿಳಿಸಿದ್ದರು. ಆ ವರದಿಯನ್ನು ಸಜ್ಜದ ನಶೀನ್ ಹಾಗೂ ಇತರೆ ಪ್ರತಿವಾದಿಗಳು ಆಕ್ಷೇಪಿಸಿದ್ದರು. ಆಗ ರಾಜ್ಯ ಸರ್ಕಾರವು ಪ್ರಕರಣದಲ್ಲಿ ಸೂಕ್ಷ್ಮ ವಿಚಾರಗಳು ಅಡಗಿರುವ ಕಾರಣ ಸಚಿವ ಸಂಪುಟದ ಮುಂದೆ ಚರ್ಚೆ ಹಾಗೂ ಪರಿಶೀಲನೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿತ್ತು. ಆ ಹೇಳಿಕೆಯನ್ನು ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ಸಿವಿಲ್ ಮೇಲ್ಮನವಿಯನ್ನು 2015ರಲ್ಲಿ ಇತ್ಯರ್ಥಪಡಿಸಿತ್ತು ಎಂದು ಆದೇಶದಲ್ಲಿ ವಿವರಿಸಿದೆ.
ಆದರೆ, ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ಗೆ ನೀಡಿದ್ದ ಭರವಸೆಯಂತೆ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳದೆ, ಧಾರ್ಮಿಕ ದತ್ತಿ ಆಯುಕ್ತರ ವರದಿ ಪರಿಶೀಲಿಸಲು ಉನ್ನತ ಮಟ್ಟದ ಸಮಿತಿಯನ್ನು ನೇಮಿಸಿತ್ತು. ಆ ಸಮಿತಿಯು 2017ರ ಡಿ.3ರಂದು ವರದಿ ಸಲ್ಲಿಸಿ, 1947ರ ಆ.15ಕ್ಕೂ ಮುನ್ನ ಯಾವ ಪೂಜೆ ನೆರವೇರಿತ್ತೋ, ಅದೇ ರೀತಿ ಪೂಜೆ ನೆರವೇರಿಸಬೇಕು ಎಂದು ಶಿಫಾರಸ್ಸು ಮಾಡಿತ್ತು. ಅದನ್ನು ಆಧರಿಸಿ ರಾಜ್ಯ ಸರ್ಕಾರವು ದತ್ತಪೀಠದಲ್ಲಿ ಪೂಜೆ ನೆರವೇರಿಸಲು ಮುಸ್ಲಿಂ ಮೌಲ್ವಿಯನ್ನು ನೇಮಿಸಿ 2018ರ ಮಾ.19ರಂದು ಆದೇಶಿಸಿತ್ತು. ಈ ಮೂಲಕ ಸುಪ್ರೀಂ ಕೋರ್ಟ್‌ಗೆ ನೀಡಿದ್ದ ಭರವಸೆಯಂತೆ ಸರ್ಕಾರ ನಡೆದುಕೊಂಡಿಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ಆಕ್ಷೇಪಿಸಿದೆ.
ಹಿಂದು ಸಮುದಾಯದವರ ಹಕ್ಕು ಮೊಟಕು!
ಇನ್ನು, ಪ್ರಕರಣಕ್ಕೆ ಸಂಬಂಧಸಿದಂತೆ ಉನ್ನತ ಮಟ್ಟದ ಸಮಿತಿ ಸ್ವತಃ ಹಾದಿ ತಪ್ಪಿದೆ. ಇದು ಪೂಜಾ ಸ್ಥಳವನ್ನು ಪರಿವರ್ತಿಸಿದ ಪ್ರಕರಣವಲ್ಲ. ಹಿಂದು ಮತ್ತು ಮುಸ್ಲಿಂ ಇಬ್ಬರೂ ಪೂಜೆ ಮಾಡುವಂತಹ ಸ್ಥಳ. ಹಾಗಿದ್ದೂ, ಸರ್ಕಾರ ಪೂಜೆ ನೆರವೇರಿಸುವ ಹಿಂದು ಸಮುದಾಯದವರ ಹಕ್ಕನ್ನು ಮೊಟಕುಗೊಳಿಸಿದೆ. ಇದೇ ವೇಳೆ ಮುಜಾವರ್ ತಮ್ಮ ನಂಬಿಕೆಗೆ ವಿರುದ್ಧವಾಗಿ ಪೂಜೆ ನೆರವೇರಿಸಲು ಕಡ್ಡಾಯ ಮಾಡಿದೆ. ಇದು ಸಂವಿಧಾನದ ಪರಿಚ್ಛೇದ 25ರ ಉಲ್ಲಂಘನೆಯಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
2010ರಲ್ಲಿ ಸುಪ್ರೀಂಕೋರ್ಟ್‌ಗೆ ಧಾರ್ಮಿಕ ದತ್ತಿ ಆಯುಕ್ತರು ಸಲ್ಲಿಸಿರುವ ವರದಿಯಲ್ಲಿ ಒಟ್ಟು 1,015 ಜನರ ಹೇಳಿಕೆಗಳನ್ನು ಪಡೆಯಲಾಗಿದ್ದು, ಅವರಲ್ಲಿ ಬಹುತೇಕ ಮಂದಿ ಹಿಂದು ಹಾಗೂ ಮುಸ್ಲಿಂ ಸಮುದಾಯದ ಇಬ್ಬರೂ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದರು ಎಂದು ಹೇಳಿದ್ದಾರೆ. ಮುಜಾವರ್ ಆಗಿದ್ದ ಎಂ.ಎನ್. ಬಾಷಾ ಅವರ ಹೇಳಿಕೆಯೂ ಇದ್ದು, ದೇವಾಲಯದಲ್ಲಿದ್ದ ಪಾದುಕೆಗಳನ್ನು ಬ್ರಾಹ್ಮಣ ಅಥವಾ ಲಿಂಗಾಯತ ಅರ್ಚಕರು ಅವರ ಸಂಪ್ರದಾಯದ ಪ್ರಕಾರ ಪೂಜೆ ನೆರವೇರಿಸುತ್ತಿದ್ದರು ಎಂದು ತಿಳಿಸಿದ್ದಾರೆ. ಜತೆಗೆ, ಹಳೆಯ ಪದ್ಧತಿಯನ್ನೇ ಮುಂದುವರಿಸಿಕೊಂಡು ಹೋಗಬೇಕೆಂದು ಬಾಷಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎರಡೂ ಧರ್ಮದ ಜನ ಪೂಜೆ ನೆರವೇರಿಸುತ್ತಿದ್ದುದು ಸ್ಪಷ್ಟ:
ಧಾರ್ಮಿಕ ದತ್ತಿ ಆಯುಕ್ತರ ಮುಂದೆ ಹೇಳಿಕೆ ನೀಡಿರುವವರಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಹಿಂದು ಹಾಗೂ ಮುಸ್ಲಿಂ ಇಬ್ಬರೂ ಅವರವರ ಸಂಪ್ರದಾಯಗಳ ಪ್ರಕಾರ ಪೂಜೆ ನೆರವೇರಿಸುತ್ತಿದ್ದರು ಎಂದು ಹೇಳಿಕೆ ನೀಡಿದ್ದರೂ, ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನೇ ಪರಿಗಣನೆಗೆ ತೆಗೆದುಕೊಂಡಿದೆ. ಸಮಿತಿಯ ವರದಿ ಪಕ್ಷಪಾತದಿಂದ ಕೂಡಿದೆ. ದಾಖಲೆಗಳ ಪ್ರಕಾರ ಮೈಸೂರು ಮಹಾರಾಜರು ದತ್ತಾತ್ರೇಯ ದೇವರು ಹಾಗೂ ಬಾಬಾ ಬುಡನ್ ದರ್ಗಾ ಎರಡಕ್ಕೂ ಪ್ರತ್ಯೇಕವಾಗಿ ದತ್ತಿ ಹಾಗೂ ಅನುದಾನಗಳನ್ನು ನೀಡಿದ್ದಾರೆ. ಇವೆಲ್ಲವನ್ನೂ ಗಮನಿಸದರೆ ಎರಡೂ ಧರ್ಮದ ಜನ ಪೂಜೆ ನೆರವೇರಿಸುತ್ತಿದ್ದುದು ಸ್ಪಷ್ಟವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ.