ಚಿತ್ರದುರ್ಗ: ಡಾ. ವಿಷ್ಣುವರ್ಧನ್ ಸ್ಮಾರಕದ ನಿರ್ಮಾಣದ ಬಗ್ಗೆ ಚರ್ಚೆ ನಡೆದಿದೆ. ನಕ್ಷೆ ಕೂಡ ತಯಾರಾಗುತ್ತಿದೆ. ಡಿ. 30ರಂದು ಡಾ. ವಿಷ್ಣುರವರ 10ನೇ ವರ್ಷದ ಪುಣ್ಯಸ್ಮರಣೆ ಇರುವುದರಿಂದ ಅಂದೇ ಸ್ಮಾರಕ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗುತ್ತದೆ ಎಂದು ನಟ ಅನಿರುದ್ಧ್ ಮಾಹಿತಿ ನೀಡಿದರು.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸ್ಮಾರಕ ನಿರ್ಮಾಣದ ಬಗ್ಗೆ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದೇವೆ. ಅವರು ಕೂಡ ಸಕರಾತ್ಮಕವಾಗಿ ಸ್ಪಂದಿಸಿ ಸ್ಮಾರಕ ನಿರ್ಮಾಣ ಕೆಲಸ ಆರಂಭಿಸಲು ಮಾತು ಕೊಟ್ಟಿದ್ದಾರೆ. ಯಾವುದೇ ಸಂದೇಹವಿಲ್ಲದೆ ಕೆಲಸ ಆರಂಭವಾಗುತ್ತದೆ ಎಂದು ತಿಳಿಸಿದರು.
ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕೆಂದು ಸರ್ಕಾರ ನಿರ್ಧರಿಸಿತ್ತು. ಅಲ್ಲಿ ಸುಖಾಸುಮ್ಮನೆ ಆರೂವರೇ ವರ್ಷ ಕಾಲ ಕಳೆದ್ರೂ ಆಗಲಿಲ್ಲ. ಬಳಿಕ ಅದರ ಎದುರುಗಡೆ ಇದ್ದ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಆದ್ಯತೆ ನೀಡಲಾಯಿತಾದ್ರೂ ಅಲ್ಲಿ ರೈತರು ಕ್ಯಾತೆ ತೆಗೆದ್ರು. ಮೈಸೂರಿನಲ್ಲೂ ಕೂಡ ಮೂರು ವರ್ಷ ಕಾಲ ಕಳೆದರೂ ಕೂಡ ಸ್ಮಾರಕ ನಿರ್ಮಾಣವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದಾದಾ ಸ್ಮಾರಕ ನಿರ್ಮಾಣಕ್ಕಾಗಿ ನಾವು ಸಾಕಷ್ಟು ಕಷ್ಟ, ಅವಮಾನಗಳನ್ನು ಅನುಭವಿಸಬೇಕಾಯಿತು. ವಿಕಾಸಸೌಧ, ವಿಧಾನಸೌಧಕ್ಕೆ ಅಲೆದಾಡಿದ್ದು, ಸಾಮಾನ್ಯ ಪಾಠವಾಗಿತ್ತು. ಮೈಸೂರಿನಲ್ಲಿ ಡಾ. ವಿಷ್ಣು ಹುಟ್ಟಿರೋದು. ಪ್ರಾಣ ಬಿಟ್ಟಿದ್ದೂ ಅಲ್ಲೇ.. ಅದಕ್ಕೆ ಅಲ್ಲಿಯೇ ಸ್ಮಾರಕ ನಿರ್ಮಾಣ ಆಗುತ್ತದೆ ಎಂದು ಹೇಳಿದರು.