ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನ ವಿವಾದ ಸಂಬಂಧ ಯಾರ ಬಳಿಯಾದರೂ ಅಧಿಕೃತ ದಾಖಲೆ ಇದ್ದರೆ ನೀಡಲಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಇದು ಆಟದ ಮೈದಾನವಾಗಿದೆ. ಪಾಲಿಕೆ ಸ್ವಾಧೀನದಲ್ಲಿ ಇದೆ. ಆದರೂ, ಕೆಲವರು ನಮ್ಮದು ಎಂದು ವಾದ ಮಾಡುತ್ತಿದ್ದು, ಅಂತಹವರು ದಾಖಲೆಗಳನ್ನು ಪಾಲಿಕೆಯ ಮುಂದೆ ಇಟ್ಟು ಸಾಬೀತುಪಡಿಸಲಿ ಎಂದಿದ್ದಾರೆ.
ಈ ಮುಂಚೆ ವ್ಯಕ್ತಿಯೊಬ್ಬರು ಈ ಜಾಗ ನಮ್ಮದು ಎಂದು ಕೋರ್ಟ್ಗೆ ಹೋಗಿದ್ದರು. ವಕ್ಫ್ ಬೋರ್ಡ್ ಈದ್ಗಾ ಮೈದಾನ ನಮ್ಮದೆಂದು ಹೇಳಿದೆ. ಯಾವ ಆಧಾರದ ಮೇಲೆ ಈ ವಿಚಾರ ಹೇಳುತ್ತಿದ್ದಾರೆ ಎನ್ನುವುದು ತಿಳಿಸಲಿ ಎಂದು ಸವಾಲು ಹಾಕಿದ್ದಾರೆ.
ಸುಪ್ರಿಂ ಕೋರ್ಟ್ ಆದೇಶದ ಪ್ರತಿ ಪಡೆಯುತ್ತೇವೆ: ಯಾವ ಆಧಾರದ ಮೇಲೆ ಈದ್ಗಾ ಮೈದಾನ ನಮ್ಮದೆಂದು ಹೇಳುತ್ತಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಈ ಕುರಿತು ಸುಪ್ರಿಂಕೋರ್ಟ್ ಆದೇಶವನ್ನು ಅಧಿಕೃತವಾಗಿ ತರಿಸಿಕೊಂಡು ಕಾನೂನು ಘಟಕದ ಸಲಹೆ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಹಿಂದೂ ಸಂಘಟನೆಗಳ ಮನವಿ: ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ಕೆಲ ಹಿಂದೂ ಸಂಘಟನೆಗಳ ಮನವಿಯ ಸಂಬಂಧ ಅನುಮತಿ ನೀಡುವುದು ಬಿಡುವುದು ಜಂಟಿ ಆಯುಕ್ತರ ವಿವೇಚನೆಗೆ ಬಿಟ್ಟಿದ್ದು. ಅಗತ್ಯ ಬಿದ್ದರೆ ಪೊಲೀಸರ ಸಲಹೆ ಪಡೆದು ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ದಾರೆ.
ಕಾಲರಾ, ಡೆಂಘೀ, ಕೋವಿಡ್ ಭೀತಿ - ಶುಚಿತ್ವಕ್ಕೆ ಪಾಲಿಕೆ ಸಿಬ್ಬಂದಿಗೆ ಮುಖ್ಯ ಆಯುಕ್ತರ ಕಟ್ಟಪ್ಪಣೆ: ರಾಜಧಾನಿಯಲ್ಲಿ ಮಳೆಗಾಲ ಆರಂಭವಾಗಿದ್ದರಿಂದ ಕಾಲರಾ, ಡೆಂಘೀ, ಕೋವಿಡ್ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ. ರೋಗ ವ್ಯಾಪಿಸಲು ಅವಕಾಶ ನೀಡದಂತೆ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದುಕೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶಿಸಿದ್ದಾರೆ.
ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಮತ್ತು ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವರ್ಚುಯಲ್ ಮೂಲಕ ಪರಿಶೀಲನೆ ಸಭೆ ನಡೆಸಿ ಅಧಿಕಾರಿಗಳಿಗೆ ಹಲವಾರು ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ.
ಬಿಬಿಎಂಪಿಯ ಎಲ್ಲ ವಲಯ ವ್ಯಾಪ್ತಿಯಲ್ಲಿ ಇರುವ ಎಲ್ಲ ಬೋರ್‌ವೆಲ್‌ಗಳು ಹಾಗೂ ಶುದ್ಧ ಕುಡಿಯುವ ನೀರಿನ ಘಟಕ (ಆರ್.ಒ ಪ್ಲಾಂಟ್)ಗಳ ನೀರಿನ ಮಾದರಿ ಸಂಗ್ರಹಿಸಿ ಜಲಮಂಡಳಿಯ ಲ್ಯಾಬ್‌ಗಳಿಗೆ ಕಳುಹಿಸಿ ನೀರಿನ ಗುಣಮಟ್ಟ ಪರೀಕ್ಷಿಸಬೇಕು. ಈ ಸಂದರ್ಭದಲ್ಲಿ ನೀರು ಕುಡಿಯಲು ಯೋಗ್ಯವಿಲ್ಲದಿದ್ದಲ್ಲಿ ಅಂತಹವುಗಳನ್ನು ಕೂಡಲೇ ಸ್ಥಗಿತಗೊಳಿಸಬೇಕು. ಹೋಟೆಲ್ಗಳು, ಬೀದಿಬದಿ ಮಾರಾಟ ಮಾಡುವ ತಿನಿಸುಗಳು, ಕಟ್ ಫ್ರೂಟ್ಸ್ ಮಾರಾಟ ಸ್ಥಳಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಲು ಪಾಲಿಕೆ ಅಧಿಕಾರಿಗಳು ಕ್ರಮ ತಗೆದುಕೊಳ್ಳಬೇಕು. ಹಾಗೆಯೇ ಕಾಲರಾ, ಡೆಂಘೀ ಹರಡುವ ಬಗ್ಗೆ ಭಿತ್ತಿಪತ್ರಗಳ ಮೂಲಕ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಭೆಯಲ್ಲಿ ತಿಳಿಸಿದ್ದಾರೆ.
ನಗರದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ನಿಧಾನಗತಿಯಲ್ಲಿ ಹೆಚ್ಚುತ್ತಿದ್ದು, ಕೋವಿಡ್ ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸಬೇಕು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸುವ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು. ಡೆಂಘೀ ಹರಡುವುದನ್ನು ತಡೆಗಟ್ಟಲು ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿ ಲಾರ್ವಾ ಉತ್ಪತ್ತಿಯಾಗುವ ತಾಣಗಳನ್ನು ಪತ್ತೆಹಚ್ಚಿ ನಾಶ ಮಾಡುವ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಿಯಮ ಉಲ್ಲಂಘಿಸಿ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಮಾಡುತ್ತಿದ್ದವರ ಬೈಕ್ ಜಪ್ತಿ