ಬೆಂಗಳೂರು: ಡೆಲ್ಟಾ ನಂತರ ಕೊರೊನಾ ವೈರಸ್ನ ಹೊಸ ರೂಪಾಂತರಿ ಒಮಿಕ್ರಾನ್ ಇದೀಗ ತನ್ನ ಆರ್ಭಟ ಮುಂದುವರೆಸಿದ್ದು, ರಾಜ್ಯದಲ್ಲಿ ಈವರೆಗೆ 31 ಮಂದಿಯಲ್ಲಿ ಹರಡಿದೆ. ಒಮಿಕ್ರಾನ್ನ ತೀವ್ರತೆ ತಿಳಿಯಲು ಮುಂದಾಗುವಂತೆ ರಾಜ್ಯ ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ.
ಒಮಿಕ್ರಾನ್ ಮೇಲೆ ಹೊಸ ಅಧ್ಯಯನ ನಡೆಸುವಂತೆ ಸಲಹೆ ನೀಡಿದ್ದು, ಇದರ ವಿರುದ್ಧ ಹೋರಾಡಲು ನಮ್ಮ ದೇಹದ ಪ್ರತಿರೋಧಕ ಶಕ್ತಿ ಸಾಕಾಗುತ್ತಾ? ಈಗಾಗಲೇ ಸೋಂಕಿಗೆ ಒಳಗಾಗದವರಲ್ಲಿ ಇರುವ ಆ್ಯಂಟಿಬಾಡಿ ಒಮಿಕ್ರಾನ್ ವಿರುದ್ಧ ಹೋರಾಡುತ್ತಾ? ಈ ಬಗ್ಗೆ ಪ್ರಯೋಗಾಲಯದಲ್ಲಿ ಅಧ್ಯಯನ ನಡೆಸಿ ಎಂದು ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ.
ಒಮಿಕ್ರಾನ್ ಮೇಲೆ ಹೇಗೆಲ್ಲ ಅಧ್ಯಯನ ನಡೆಸಬೇಕು?
- ಈಗಾಗಲೇ ಜನ ಸಮುದಾಯದಲ್ಲಿರುವ ಪ್ರತಿರೋಧಕ ಶಕ್ತಿ ಹೊಸ ರೂಪಾಂತರಿ ವಿರುದ್ಧ ಹೋರಾಡಲು ಸಾಕಾಗುತ್ತದೆಯೇ ಎಂಬುದನ್ನ ತಿಳಿಯಬೇಕು
- ಇದಕ್ಕಾಗಿ ಈಗಾಗಲೇ ಸೀರೋ ಸರ್ವೆಯಲ್ಲಿ ಪಡೆಯಲಾದ ರಕ್ತದ ಮಾದರಿಯನ್ನು ಬಳಸಿ ಪರೀಕ್ಷಿಸಲಾಗುತ್ತೆ
- ಲ್ಯಾಬ್ನಲ್ಲಿ ಒಮಿಕ್ರಾನ್ ಅಭಿವೃದ್ಧಿ ಪಡಿಸಲಾಗುತ್ತೆ
- ಈಗಾಗಲೇ ಸೋಂಕಿಗೆ ಒಳಗಾಗಿ ಗುಣಮುಖ ಆದವರ ಆ್ಯಂಟಿಬಾಡಿಯ ಮೇಲೆ ಒಮಿಕ್ರಾನ್ ಇಂಜೆಕ್ಟ್ ಮಾಡಲಾಗುತ್ತೆ
- ಅವರ ಮೇಲೆ ಇದು ಎಷ್ಟು ಪರಿಣಾಮಕಾರಿ ಎಂಬುದನ್ನ ತಿಳಿಯಲಾಗುತ್ತದೆ
- ಅಲ್ಲದೇ ವ್ಯಾಕ್ಸಿನ್ ಪಡೆದವರಲ್ಲಿ ಇದು ಹೇಗೆ ವರ್ತಿಸಬಹುದು ಎಂಬುದನ್ನೂ ತಿಳಿಯಬಹುದು
- ಈ ಅಧ್ಯಯನದಿಂದ ವೈರಸ್ ಬಗೆಗಿನ ಇನ್ನಷ್ಟು ಮಹತ್ವದ ಅಂಶಗಳನ್ನು ತಿಳಿದು ಮುಂದಿನ ಕ್ರಮಕ್ಕೆ ರೂಪುರೇಷೆ ಸಿದ್ಧ ಮಾಡಲು ಸಹಕಾರಿಯಾಗಬಹುದು
ಇದನ್ನೂ ಓದಿ: ದೇಶದಲ್ಲಿ ಹೊಸದಾಗಿ 7,189 ಕೋವಿಡ್ ಕೇಸ್ ಪತ್ತೆ: ಏರುತ್ತಲೇ ಇದೆ ಒಮಿಕ್ರಾನ್ ಸೋಂಕು
ಒಟ್ಟಾರೆ, ಒಮಿಕ್ರಾನ್ ವರ್ತನೆ ತಿಳಿಯಲು ಸಮಿತಿ ನಡೆಸಿದ ಸಭೆಯಲ್ಲಿ ಆರೋಗ್ಯ ಇಲಾಖೆಗೆ ಈ ಸಲಹೆಗಳನ್ನು ಶಿಫಾರಸು ಮಾಡಲಾಗಿದೆ. ಇದರ ಅಧ್ಯಯನದಿಂದ ಏನೆಲ್ಲ ಅಂಶಗಳು ಹೊರ ಬರಲಿದೆ ಎಂಬುದು ಕುತೂಹಲ ಮೂಡಿಸಿದೆ.