ಬೆಂಗಳೂರು: 'ತಾಕತ್ ಇದ್ದರೆ ನನ್ನ ಕಾರು ಹಿಡಿ' ಎಂದು ಸೆಲ್ಫಿ ವಿಡಿಯೋ ಮಾಡಿ ಹರಿಬಿಟ್ಟು ಬೆಂಗಳೂರು ಟ್ರಾಫಿಕ್ ಪೊಲೀಸ್ಗೆ ಸವಾಲು ಎಸೆದಿದ್ದ ಭೂಪನನ್ನು ಕೊನೆಗೂ ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ನಗರದ ನರಸಿಂಹರಾಜ ಠಾಣಾ ಪೊಲೀಸರು ಟ್ಯಾಕ್ಸಿ ಚಾಲಕ ರಘು ಎಂಬಾತನನ್ನು ಬಂಧಿಸಿದ್ದಾರೆ.
ಟ್ಯಾಕ್ಸಿ ಚಾಲಕನಾಗಿರುವ ರಘು ಮಾಡಿದ್ದ ಸೆಲ್ಫಿ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ಟಾಟಾ ಏಸ್ ಚಾಲಕನ ಮೇಲೆ ಟ್ರಾಫಿಕ್ ಪೇದೆ ಹಲ್ಲೆ ಪ್ರಕರಣ ಉಲ್ಲೇಖಿಸಿದ್ದ. ನನ್ನ ಬಳಿ ವಾಹನದ ದಾಖಲಾತಿಗಳು ಇಲ್ಲ. ಮುಂದಿನ ತಿಂಗಳು 2ರಂದು ಬೆಂಗಳೂರಿಗೆ ಬರುತ್ತಿರುವೆ. ತಾಕತ್ತಿದ್ದರೆ ತನ್ನನ್ನು ಹಿಡಿದು ವಾಹನ ಜಪ್ತಿ ಮಾಡುವಂತೆ ನಗರ ಟ್ರಾಫಿಕ್ ಪೊಲೀಸ್ಗೆ ಸವಾಲೆಸೆದಿದ್ದ.
ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ವಿಡಿಯೋವನ್ನು ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ರವಾನಿಸಿದ್ದರು. ಈ ಸಂಬಂಧ ಟ್ಯಾಕ್ಸಿ ನಂಬರ್ ಆಧಾರದಲ್ಲಿ ನರಸಿಂಹರಾಜ ಪೊಲೀಸರು ರಘುನನ್ನ ಬಂಧಿಸಿ ವಿಚಾರಣೆ ಒಳಪಡಿಸಿದ್ದಾರೆ. ಈ ವೇಳೆ ತಾನು ಮಾಡಿದ್ದ ವಿಡಿಯೋ ದೊಡ್ಡ ಮಟ್ಟಿಗೆ ವೈರಲ್ ಆಗುವ ನಿರೀಕ್ಷೆ ಇರಲಿಲ್ಲ ಎಂದು ಯುವಕ ತಪ್ಪೊಪ್ಪಿಕೊಂಡಿದ್ದಾನೆ.