ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗಲು ದೆಹಲಿಯ ತಬ್ಲಿಘಿ ಹಾಗೂ ಅಜ್ಮೀರ್ನಲ್ಲಿ ನಡೆದ ಸಭೆ ಮುಖ್ಯ ಕಾರಣ ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಹರಡಲು ತಬ್ಲಿಘಿಗಳು ಮತ್ತು ಅಜ್ಮೀರ್ಗೆ ಹೋಗಿ ಬಂದವರೇ ನೇರ ಹೊಣೆ ಎಂದಿದ್ದಾರೆ. ಹೀಗಾಗಿ ತಬ್ಲಿಘಿಗಳು ಹಾಗೂ ಬುದ್ಧಿಜೀವಿಗಳ ಮುಂದೆ 13 ಪ್ರಶ್ನೆಗಳನ್ನು ರವಿಕುಮಾರ್ ಇಟ್ಟಿದ್ದಾರೆ.
ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆ ಮುಗಿಯಿತು. ಅದಾದ ನಂತರ ಕೊರೊನಾ ವೈರಸ್ ಜಗತ್ತನ್ನೇ ಆವರಿಸಿರುವ ಸಂದರ್ಭದಲ್ಲಿ ಒಂದು ದೇಶದ ಪ್ರಜೆಗಳಾಗಿ ನಡೆದುಕೊಳ್ಳಬೇಕಾದ ಜವಾಬ್ದಾರಿಯ ಬಗೆ ಇದೇನಾ?
ತಪ್ಪು ಮಾಡಿದಾಗ ತಿದ್ದಿ ಹೇಳಬೇಕು. ಆದರೆ, ಯಾವುದೇ ನಾಯಕರು ಈ ಕಾರ್ಯದಲ್ಲಿ ತೊಡಗಿಲ್ಲ. ತಬ್ಲಿಘಿ ನಾಯಕ ಮೌಲಾನಾ ಸಾದ್ ಕೊರೋನಾ ತಪಾಸಣೆಗೆ ಹಿಂದೇಟು ಹಾಕಿದ್ದು, ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ, ಉಗುಳುವುದು, ಅವಮಾನಿಸುವುದು ಸರಿಯೇ ಎಂದು ಪ್ರಶ್ನಿಸಿದರು.
ಪಾದರಾಯನಪುರದ ಪುಂಡರು ಎಸಗಿದ ದೇಶದ್ರೋಹವನ್ನು ನಾಡೇ ಖಂಡಿಸಿದೆ. ಇದು ಅಲ್ಲೇ ನಿಲ್ಲದೇ ಟಿಪ್ಪುನಗರ, ಕಲಬುರಗಿಯಲ್ಲೂ ಹಬ್ಬಿದೆ. ಈ ಬಗ್ಗೆ ನಾಯಕರು ಏಕೆ ಕೈಕಟ್ಟಿ ಕುಳಿತಿದ್ದಾರೆ. ಮುಖ್ಯಮಂತ್ರಿಗಳು ಸಹ ಎರಡು ಬಾರಿ ಸಭೆ ನಡೆಸಿದರು. ಅವರೂ ಸುಮ್ಮನೆ ಇದ್ದಾರೆ. ಇಷ್ಟೆಲ್ಲಾ ಅನಾಹುತಗಳಿಗೆ ಕಾರಣವಾಗಿರುವರು ತಬ್ಲಿಘಿಗಳು, ಈಗ ಅಜ್ಮೀರಿಗಳು. ಇವರ ಬಗ್ಗೆ ಪ್ರಗತಿಪರರು, ಬುದ್ಧಜೀವಿಗಳು ತುಟಿ ಬಿಚ್ಚುತ್ತಿಲ್ಲ ಏಕೆ? ಕೊರೊನಾ ಹೆಚ್ಚಾಗುವುದಕ್ಕೆ ತಬ್ಲಿಘಿಗಳು ನೇರ ಕಾರಣ ಎಂದು ಆರೋಪಿಸಿದರು.
ತಬ್ಲಿಘಿಗಳು ಹಾಗೂ ಅಜ್ಮೀರಿಗಳು ತಲೆಮರೆಸಿಕೊಂಡು ಎರಡನೇ ಹಂತದ ಕೊರೊನಾ ಹಬ್ಬಿಸುತ್ತಿದ್ದಾರೆ. ಈಗಲೂ ಕಳ್ಳರಂತೆ ತಪ್ಪಿಸಿಕೊಂಡು ನಗರಗಳಲ್ಲಿ ಪ್ರವೇಶಿಸುತ್ತಿದ್ದಾರೆ. ಸರ್ಕಾರ ತಕ್ಷಣ ಜಿಲ್ಲೆಗಳ ಗಡಿಗಳಲ್ಲಿ ಸರಿಯಾದ ಕಾವಲು ಹಾಕಬೇಕು ಮತ್ತು ಅವರನ್ನು ಸರ್ಕಾರದ ಅಧೀನದಲ್ಲಿಯೇ ಕ್ವಾರಂಟೈನ್ ಮಾಡಬೇಕು ಎಂದು ಒತ್ತಾಯಿಸಿದರು.