ಬೆಂಗಳೂರು: ನಾನೇ ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿರುವ ಕಾರಣ ಸ್ವಾಮೀಜಿಗಳು ಈ ಬಗ್ಗೆ ಗೊಂದಲ ಉಂಟು ಮಾಡಬಾರದು ಎಂದು ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ತಮ್ಮ ಸಂಪುಟ ಸಹದ್ಯೋಗಿಗಳ ಜೊತೆಗೂಡಿ ಭೋಜನ ಸೇವಿಸಿದ ಬಳಿಕ ಮಾತನಾಡಿದ ಅವರು, ರಾಜಭವನಕ್ಕೆ ಹೋಗಿ ನನ್ನ ರಾಜೀನಾಮೆ ಪತ್ರವನ್ನು ನೀಡಿದ್ದೇನೆ. ಎಲ್ಲರಿಗೂ ಅವಕಾಶ ಸಿಗಬೇಕು. ರಾಜ್ಯದ ಜನರ ಪ್ರೀತಿ ವಿಶ್ವಾಸ, ಕಾರ್ಯಕರ್ತರು ನೀಡಿದ ಪ್ರೀತಿ ವಿಶ್ವಾಸವನ್ನು ನಾನು ಎಂದು ಮರೆಯಲು ಸಾಧ್ಯವಿಲ್ಲ. ನಾನೇ ಸ್ವಇಚ್ಛೆಯಿಂದ ರಾಜೀನಾಮೆ ನೀಡುತಿದ್ದೇನೆ. ಹಾಗಾಗಿ, ಯಾವುದೇ ಸ್ವಾಮೀಜಿಗಳು ಈ ಬಗ್ಗೆ ಗೊಂದಲ ಉಂಟುಮಾಡಬಾರದು. ಅವರು ಕೊಟ್ಟ ಬೆಂಬಲಕ್ಕೆ ನಾನು ಋಣಿಯಾಗಿರುತ್ತೇನೆ ಎಂದರು.
ಬಹಳ ಸಂತೋಷದಿಂದ ರಾಜೀನಾಮೆ ನೀಡುತ್ತಿದ್ದೇನೆ. 75 ವರ್ಷ ಮೀರಿದ್ದರೂ ನನಗೆ ಅವಕಾಶ ನೀಡಿದ ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದೆ ಯಾರು ಮುಖ್ಯಮಂತ್ರಿಯಾಗುತ್ತಾರೋ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ರಾಜ್ಯದ ಮಠಾಧೀಶರು, ಜನತೆ, ಕಾರ್ಯಕರ್ತರು ನನಗೆ ತೋರಿಸಿದ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದಗಳು ಎಂದು ತಿಳಿಸಿದರು.
ಎರಡು ತಿಂಗಳ ಹಿಂದೆನೇ ನಾನು ರಾಜೀನಾಮೆ ಕೊಡಲು ನಿರ್ಧರಿಸಿದ್ದೆನು. ಇಂದು ರಾಜೀನಾಮೆ ಘೋಷಣೆ ಮಾಡಲು ತೀರ್ಮಾನಿಸಿದ್ದೆ. ಅದರಂತೆ ರಾಜಭವನಕ್ಕೆ ತೆರಳಿ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ ಎಂದರು.
ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ: ರಾಜ್ಯಪಾಲರಿಗೆ ಹಸ್ತಾಂತರ