ಬೆಂಗಳೂರು: ರೈತರ ಬಾಕಿ ಬಿಲ್ ಪಾವತಿಸುವಂತೆ ಸರ್ಕಾರ ಡೆಡ್ ಲೈನ್ ನೀಡಿದರೂ, ಇನ್ನೂ 13 ಸಕ್ಕರೆ ಕಾರ್ಖಾನೆಗಳು ಬಿಲ್ ಬಾಕಿ ಉಳಿಸಿಕೊಂಡಿವೆ. ರೈತರಿಗೆ ಬಿಲ್ ಬಾಕಿ ಉಳಿಸಿಕೊಂಡ ಸಕ್ಕರೆ ಕಾರ್ಖಾನೆಗಳ ಪೈಕಿ ಸಚಿವ ನಿರಾಣಿ ಮಾಲೀಕತ್ವದ ನಿರಾಣಿ ಶುಗರ್ಸ್ ಕಾರ್ಖಾನೆ ಕೂಡ ಸೇರಿದೆ.
ಕಬ್ಬು ಬೆಳೆಗಾರರಿಗೆ ಸಾಮಾನ್ಯವಾಗಿ ಸಕ್ಕರೆ ಕಾರ್ಖಾನೆಗಳು ಪ್ರತಿ ವರ್ಷ ಕೋಟ್ಯಂತರ ರೂ. ಬಿಲ್ ಬಾಕಿ ಉಳಿಸಿಕೊಂಡಿರುತ್ತವೆ. ರೈತರು ಈ ಬಗ್ಗೆ ಹೋರಾಟ ಮಾಡುತ್ತಲೇ ಇರುತ್ತವೆ. ಈ ಬಾರಿಯೂ ಅಂದರೆ ಜು.1, 2021 ರಿಂದ ಜೂ.30, 2022ರವರೆಗಿನ ಅವಧಿಯಲ್ಲಿ ಸಕ್ಕರೆ ಕಾರ್ಖಾನೆಗಳು ಸಾವಿರಾರು ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದ್ದವು. ಬಳಿಕ ಸರ್ಕಾರ ಮಧ್ಯೆ ಪ್ರವೇಶಿಸಿ ಸಕ್ಕರೆ ಕಾರ್ಖಾನೆಗಳ ಜತೆ ಸಭೆ ನಡೆಸಿ, ಬಾಕಿ ಬಿಲ್ ಪಾವತಿಸುವಂತೆ ಖಡಕ್ ಸೂಚನೆ ನೀಡಿತ್ತು.
ಜೂನ್ ತಿಂಗಳಿನಲ್ಲಿ ಬಿಲ್ ಪಾವತಿಸುವಂತೆ ಗಡುವು ನೀಡಿತ್ತು. ಇದರ ಪರಿಣಾಮವಾಗಿ ಬಹುತೇಕ ಸಕ್ಕರೆ ಕಾರ್ಖಾನೆಗಳು ಬಾಕಿ ಬಿಲ್ ಅನ್ನು ರೈತರಿಗೆ ಪಾವತಿಸಿವೆ. ಆದರೆ, ಸರ್ಕಾರದ ಖಡಕ್ ಸೂಚನೆಗೂ ಕ್ಯಾರೆ ಎನ್ನದ ಕೆಲ ಸಕ್ಕರೆ ಕಾರ್ಖಾನೆಗಳು ಜುಲೈ ತಿಂಗಳು ಮುಗಿದರೂ ಕಬ್ಬು ಬೆಳೆಗಾರರಿಗೆ ಬಿಲ್ ಪಾವತಿಸಿಲ್ಲ.
ನಿರಾಣಿ ಶುಗರ್ಸ್ ಸೇರಿ 13 ಕಾರ್ಖಾನೆಗಳಿಂದ ಬಾಕಿ: ಗುಡುವು ಮೀರಿ ತಿಂಗಳು ಕಳೆದರೂ ಇನ್ನೂ ಕೆಲ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಬಿಲ್ ಬಾಕಿ ಉಳಿಸಿಕೊಂಡಿದೆ. ಜು.1, 2021 ರಿಂದ ಜೂ.30, 2022ಗೆ ಮುಗಿಯುವ ಹಂಗಾಮಿನಲ್ಲಿ ಇನ್ನೂ 13 ಸಕ್ಕರೆ ಕಾರ್ಖಾನೆಗಳು ಬಿಲ್ ಬಾಕಿ ಉಳಿಸಿಕೊಂಡಿವೆ. ಸಕ್ಕರೆ ಇಲಾಖೆ ನೀಡಿದ ಅಂಕಿ - ಅಂಶದಂತೆ ಸಕ್ಕರೆ ಸಚಿವರು ಬಿಲ್ ಪಾವತಿಸುವಂತೆ ಖಡಕ್ ಸೂಚನೆ ನೀಡಿದ್ದರೂ 13 ಸಕ್ಕರೆ ಕಾರ್ಖಾನೆಗಳು 129.95 ಕೋಟಿ ರೂ ಬಿಲ್ನ್ನು ಬಾಕಿ ಉಳಿಸಿಕೊಂಡಿದೆ. ವಿಪರ್ಯಾಸ ಎಂದರೆ ನಿರಾಣಿ ಶುಗರ್ಸ್ 9.98 ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ.
59 ಸಕ್ಕರೆ ಕಾರ್ಖಾನೆಗಳಿಂದ ಬಿಲ್ ಪೂರ್ಣ ಪಾವತಿ: ಸರ್ಕಾರದ ಖಡಕ್ ಸೂಚನೆಯನ್ನು ಪಾಲಿಸಿರುವ 59 ಸಕ್ಕರೆ ಕಾರ್ಖಾನೆಗಳು ಬಾಕಿ ಇದ್ದ ಸಂಪೂರ್ಣ ಬಿಲ್ನ್ನು ಪಾವತಿಸಿದೆ. 59 ಸಕ್ಕರೆ ಕಾರ್ಖಾನೆಗಳು ಸುಮಾರು 19,765 ಕೋಟಿ ರೂ. ಬಿಲ್ನ್ನು ರೈತರಿಗೆ ಪಾವತಿಸಿದೆ. ರಾಜ್ಯದಲ್ಲಿನ ಒಟ್ಟು 72 ಸಕ್ಕರೆ ಕಾರ್ಖಾನೆಗಳು, ಈವರೆಗೆ ಸುಮಾರು 6.22 ಕೋಟಿ ಮೆಟ್ರಿಕ್ ಟನ್ ಕಬ್ಬು ಅರೆದಿದೆ. ಆ ಮೂಲಕ 59.78 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಲಾಗಿದೆ.
ಯಾವೆಲ್ಲಾ ಕಾರ್ಖಾನೆಗಳಿಂದ ಬಿಲ್ ಬಾಕಿ?:
- ನಿರಾಣಿ ಶುಗರ್ಸ್, ಬಾಗಲಕೋಟೆ- 9.98 ಕೋಟಿ ರೂ.
- ಮಲಪ್ರಭಾ ಎಸ್.ಎಸ್.ಕೆ, ಬೆಳಗಾವಿ- 6.95 ಕೋಟಿ ರೂ.
- ಜಮಖಂಡಿ ಶುಗರ್ಸ್- 7.95 ಕೋಟಿ ರೂ.
- ಶ್ರೀ ಸಾಯಿ ಪ್ರಿಯ ಶುಗರ್ಸ್- 4.25 ಕೋಟಿ ರೂ.
- ಬೀದರ್ ಎಸ್.ಎಸ್.ಕೆ- 9.62 ಕೋಟಿ ರೂ.
- ಇಂಡಿಯನ್ ಶುಗರ್ಸ್- 3.06 ಕೋಟಿ ರೂ.
- ಜಮಖಂಡಿ ಶುಗರ್ಸ್, ವಿಜಯಪುರ- 1.06 ಕೋಟಿ ರೂ.
- ನಂದಿ ಎಸ್.ಎಸ್.ಕೆ, ವಿಜಯಪುರ- 13.38 ಕೋಟಿ ರೂ.
- ಶ್ರೀ ಬಸವೇಶ್ವರ ಶುಗರ್ಸ್, ವಿಜಯಪುರ- 19.57 ಕೋಟಿ ರೂ.
- ಉಗಾರ್ ಶುಗರ್ಸ್, ಕಲಬುರಗಿ- 12.12 ಕೋಟಿ ರೂ.
- ಉಗಾರ್ ಶುಗರ್ಸ್, ಬೆಳಗಾವಿ- 33.06 ಕೋಟಿ ರೂ.
- ಕೋರ್ ಗ್ರೀನ್ ಶುಗರ್ಸ್, ಯಾದಗಿರಿ- 1.87 ಕೋಟಿ ರೂ.
- ಜೆಮ್ ಶುಗರ್ಸ್, ಬೆಳಗಾವಿ- 7.08 ಕೋಟಿ ರೂ.
ಇದನ್ನೂ ಓದಿ: ಮೂರುವರೆ ಸಾವಿರ ಕೋಟಿ ರೂಪಾಯಿ ಕರೆಂಟ್ ಬಿಲ್ ನೋಡಿ ಆಸ್ಪತ್ರೆ ಸೇರಿದ ಮಾವ-ಸೊಸೆ