ಬೆಂಗಳೂರು: ರಾಜ್ಯದ ಪ್ರಥಮ ಕ್ರೀಡಾ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಯಲಹಂಕದಲ್ಲಿ 100 ಎಕರೆ ಜಮೀನು ಗುರುತಿಸಲಾಗಿದೆ. 65 ಎಕರೆಯನ್ನು ಈಗಾಗಲೇ ಸರ್ಕಾರದ ವಶಕ್ಕೆ ಪಡೆಯಲಾಗಿದೆ. 35 ಎಕರೆ ಪಡೆಯಲು ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ ಎಂದು ಸಚಿವ ಕೆ.ಸಿ.ನಾರಾಯಣ ಗೌಡ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾತನಾಡಿದ ಅವರು, ಜಕ್ಕೂರು ಏರೋಡ್ರೋಮ್‍ನಲ್ಲಿ 100 ಮಕ್ಕಳಿಗೆ ಪೈಲಟ್ ತರಬೇತಿ ಕೊಡಲಾಗುವುದು. 6 ಏರ್ಕ್ರಾಪ್ಟ್ಗಳಲ್ಲಿ 3 ಪೈಲಟ್‍ಗಳು ತರಬೇತಿ ಕೊಡುತ್ತಿದ್ದಾರೆ. ಹಳ್ಳಿ ಹಳ್ಳಿಯಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ 504 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಖೇಲೋ ಇಂಡಿಯಾ ಉದ್ಘಾಟನೆಯಾಗಿದ್ದು, ನಾಲ್ಕು ಕಡೆ ವಿವಿಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಅಮೃತ ಕ್ರೀಡಾ ದತ್ತು ಯೋಜನೆಯಡಿ 75 ಮಕ್ಕಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಲು ಯೋಜನೆ ಮಾಡುತ್ತಿದ್ದೇವೆ. ಹಳೇ ಕುಸ್ತಿಪಟುಗಳ ಮಾಸಾಶನವನ್ನು 1 ಸಾವಿರ ಹೆಚ್ಚಿಸಲಾಗಿದೆ. ಗ್ರಾಮೀಣ ಗರಡಿ ಮನೆಗಳ ಪುನರ್ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಕಂಠೀರವ ಸ್ಟುಡಿಯೋದಲ್ಲಿ ಹಾಳಾಗಿದ್ದ ಸಿಂಥೆಟಿಕ್ ಟ್ರ್ಯಾಕ್ ಅನ್ನು ಮರುನಿರ್ಮಿಸಲು 5 ಕೋಟಿ ವೆಚ್ಚ ಮಾಡಲಾಗುತ್ತಿದೆ.
ತುಮಕೂರಿನಲ್ಲಿ 4.5 ಕೋಟಿ ವೆಚ್ಚದಲ್ಲಿ ದೊಡ್ಡ ಕ್ರೀಡಾ ಕಾಂಪ್ಲೆಕ್ಸ್ ನಿರ್ಮಿಸಲಾಗುತ್ತಿದೆ. ಬೆಂಗಳೂರು, ಮಂಡ್ಯದಲ್ಲಿ ಮಕ್ಕಳ ಕ್ರೀಡಾ ಸಾಮರ್ಥ್ಯ ಪರೀಕ್ಷಾ ಕೇಂದ್ರ ಆರಂಭಿಸಲಾಗುತ್ತದೆ. ಎಲ್ಲ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್ ಸಿದ್ಧಪಡಿಸಲಾಗುವುದು. 10-15 ಹಾಸ್ಟೆಲ್ ಆರಂಭಗೊಂಡಿದೆ.
350 ರೂಪಾಯಿಯಿದ್ದ ರೇಷ್ಮೆ ಗೂಡಿನ ದರವೀಗ 800 ರೂಪಾಯಿಗೆ ಏರಿದೆ. ರಾಮನಗರ ಚನ್ನಪಟ್ಟಣದಲ್ಲಿ ರೇಷ್ಮೆಗೆ ಸಂಬಂಧಿಸಿ ಹೈಟೆಕ್ ಮಾರುಕಟ್ಟೆ ನಿರ್ಮಿಸಲು 141 ಕೋಟಿ ವ್ಯಯಿಸಲಾಗುತ್ತಿದೆ. ಶಿಡ್ಲಘಟ್ಟ, ಹರಿಹರ, ಹಾವೇರಿ ಹಾಗೂ ಕಲಬುರಗಿಯಲ್ಲೂ ಆಧುನಿಕ ರೇಷ್ಮೆ ಮಾರುಕಟ್ಟೆ ನಿರ್ಮಾಣವಾಗಲಿದೆ ಎಂದು ಸಚಿವರು ವಿರಿಸಿದರು.
ಇದನ್ನೂ ಓದಿ: ಮಾಸ್ಕ್ ಕಡ್ಡಾಯಗೊಳಿಸಿ ಸರ್ಕಾರ ಆದೇಶ: ಬಿಜೆಪಿ ಕಾರ್ಯಕ್ರಮದಲ್ಲೇ ರೂಲ್ಸ್ ಬ್ರೇಕ್