ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ವಾಯು ಮಾಲಿನ್ಯ ಆಗುವುದು ಒಂದು ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಿಂದ ಮತ್ತೊಂದು ವಾಹನಗಳಿಂದ.
ಬಸ್, ಕಾರು, ಬೈಕ್ ಹೀಗೆ ನಾನಾ ಬಗೆಯ ವಾಹನಗಳು ಹೊರಸೂಸುವ ಹೊಗೆಯಿಂದ ಉದ್ಯಾನಗರಿಯ ವಾತಾವರಣ ಹದಗೆಟ್ಟಿದೆ. ಹೀಗಾಗಿಯೇ, ವಾಹನಗಳಿಂದ ಬರುವ ಹೊಗೆಯನ್ನ ಕಡಿಮೆ ಮಾಡಲು ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗಿದೆ.
ಇದೀಗ ನಗರವನ್ನು ಮತ್ತಷ್ಟು ಪರಿಸರ ಸ್ನೇಹಿ ಮಾಡುವ ಉದ್ದೇಶದೊಂದಿಗೆ ವಾಯು ಮಾಲಿನ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ. ಮುಖ್ಯವಾಗಿ ಜನರು ವಿದ್ಯುತ್ ವಾಹನಗಳನ್ನು ಬಳಸಲು ಉತ್ತೇಜಿಸಲು ಬೆಸ್ಕಾಂನಿಂದ ನೂತನ ಚಾರ್ಜಿಂಗ್ ಸ್ಟೇಶನ್‌ಗಳನ್ನ ನಿರ್ಮಾಣ ಮಾಡಲಾಗುತ್ತಿದೆ.
ನಗರ ಮಾತ್ರವಲ್ಲದೇ ಹೆದ್ದಾರಿ ಹಾಗೂ ಜಿಲ್ಲೆಗಳಲ್ಲಿಯೂ ಚಾರ್ಜಿಂಗ್ ಸ್ಟೇಶನ್ ನಿರ್ಮಾಣಕ್ಕೆ ತಯಾರಿ ನಡೆದಿದೆ. ಎಲೆಕ್ಟ್ರಿಕ್ ವೆಹಿಕಲ್ನಲ್ಲಿ ಬಹುಮುಖ್ಯವಾಗಿ ಸಮಸ್ಯೆಯಾಗುವುದೇ ಚಾರ್ಜಿಂಗ್ ಸ್ಪೇಶನ್ಗಳು. ಬಹುತೇಕರು ಚಾರ್ಜಿಂಗ್ ಕಾರಣಕ್ಕೆ ಎಲೆಕ್ಟ್ರಿಕ್ ವೆಹಿಕಲ್ನತ್ತ ಉತ್ಸಾಹ ತೋರುವುದು ಕಡಿಮೆ. ಇದನ್ನ ನಿರ್ವಹಿಸಲು ಬೆಸ್ಕಾಂ ಯೋಜನೆ ರೂಪಿಸಿದೆ.
455 ಚಾರ್ಜಿಂಗ್ ಸ್ಟೇಶನ್‌ಗಾಗಿ ಸ್ಥಳ ನಿಗದಿ
ಸದ್ಯ ನಗರದಲ್ಲಿ ಈಗ 136ಕ್ಕೂ ಅಧಿಕ ಚಾರ್ಜಿಂಗ್ ಸ್ಟೇಶನ್‌ಗಳಿವೆ. ಹೊಸ ಸ್ಟೇಶನ್‌ಗಾಗಿ ಹೆಚ್ಚುವರಿ 455 ಸ್ಥಳಗಳನ್ನು ಗುರುತಿಸಲಾಗಿದೆ. 176 ನೂತನ ಚಾರ್ಜಿಂಗ್ ಸ್ಟೇಶನ್‌ಗಳಿಗೆ ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ. ಮಾರ್ಚ್ ಒಳಗೆ ಉಳಿದ ಸ್ಟೇಶನ್‌ಗಳಿಗೂ ಟೆಂಡರ್ ಫೈನಲ್ ಮಾಡಲಾಗುತ್ತೆ ಅಂತಾ ಬೆಸ್ಕಾಂನ ಎಂ ಡಿ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಬೆಂಗಳೂರು ನಗರದಲ್ಲೇ ಕನಿಷ್ಠ 500-600 ಚಾರ್ಜಿಂಗ್ ಸ್ಟೇಶನ್‌ಗಳ ಸ್ಥಾಪನೆ ಮಾಡಲಾಗುವುದು. ಬೆಂಗಳೂರು ನಗರ ಮಾತ್ರವಲ್ಲದೇ ಎಲ್ಲ ಹೈವೇಗಳು ಹಾಗೂ ಇತರೆ ಜಿಲ್ಲೆಗಳಲ್ಲಿಯೂ ಸ್ಥಾಪನೆಗೆ ತಯಾರಿ ನಡೆದಿದೆ. ಬೆಸ್ಕಾಂ ಲಿಮಿಟ್ ಈಗ ದಾವಣೆಗೆರೆಯವರೆಗೂ ಹಬ್ಬಿರೋದು ಪ್ಲಸ್ ಪಾಯಿಂಟ್ ಆಗಿದೆ.
ಪ್ರತಿ ಜಿಲ್ಲೆಯ ಎಸ್ಕಾಂಗಳಲ್ಲಿ ಚಾರ್ಜಿಂಗ್ ಸ್ಟೇಶನ್ ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳ ಡಿಸಿಗಳಿಗೆ ಪತ್ರ ಬರೆಯಲಾಗಿದ್ದು, ಸಕಾರಾತ್ಮಕ ಸ್ಪಂದನೆ ಬಂದಿದೆ. ಇನ್ನು ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಸರ್ಕಾರಿ ಜಾಗಗಳನ್ನೂ ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
ಸದ್ಯ, ಚಾರ್ಜಿಂಗ್ ಸ್ಟೇಶನ್‌ಗಳ ಸ್ಥಾಪನೆಗೆ ಪಿಪಿಪಿ ಮಾಡೆಲ್‌ಗೆ ಬೆಸ್ಕಾಂ ಮೊದಲ ಆದ್ಯತೆ ನೀಡಲಿದೆ. ಜನರು ಮುಂದೆ ಬಂದಿಲ್ಲವೆಂದಾಗ ಮಾತ್ರ ಬೆಸ್ಕಾಂ ತನ್ನ ಖರ್ಚಿನಲ್ಲಿ ಸ್ಥಾಪಿಸಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಬಿಡಿಎ ಅಧಿಕಾರಿಗಳ ವಿರುದ್ಧ ಮತ್ತೆ 8 FIR ದಾಖಲು