ಬೆಂಗಳೂರು: ರಾಜ್ಯದಲ್ಲಿ ಜವಳಿ ಉದ್ಯಮ ಅಭಿವೃದ್ಧಿಗೊಳಿಸುವ ಹಾಗೂ ನಿರುದ್ಯೋಗ ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನೂತನ ಜವಳಿ ನೀತಿಯನ್ನು ಜಾರಿಗೊಳಿಸಿದೆ.
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ನೂತನ ಜವಳಿ ಹಾಗೂ ವಸ್ತ್ರನೀತಿ 2019-2024ಕ್ಕೆ ಅನುಮೋದನೆ ನೀಡಲಾಗಿದೆ. ನೂತನ ಜವಳಿ ನೀತಿಯಲ್ಲಿ ಮುಂದಿನ ಐದು ವರ್ಷದಲ್ಲಿ 10 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವ ಮೂಲಕ ಸುಮಾರು ಐದು ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದರು.
ಜವಳಿ ಉದ್ಯಮವನ್ನು ಅಭಿವೃದ್ಧಿಗೊಳಿಸುವ ಜತೆಯಲ್ಲಿ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯದ ಯುವಕರಲ್ಲಿ ಕೌಶಲ ಅಭಿವೃದ್ಧಿಗೊಳಿಸುವ ಯೋಜನೆ ಈ ನೀತಿಯಲ್ಲಿ ಜಾರಿಗೊಳಿಸಲಾಗಿದೆ. ಪ್ರಮುಖವಾಗಿ ಬೆಂಗಳೂರು ಹೊರತುಪಡಿಸಿ, ಕೈಗಾರಿಕೆಗಳನ್ನು ಕಲ್ಯಾಣ-ಕರ್ನಾಟಕ ಹಾಗೂ ರಾಜ್ಯದ ಇತರೆ ಭಾಗಗಳಿಗೆ ಸ್ಥಾಪಿಸಲು ಈ ನೀತಿಯಲ್ಲಿ ಯೋಜನೆ ರೂಪಿಸಲಾಗಿದೆ. ಕಲ್ಯಾಣ-ಕರ್ನಾಟಕ ಹಾಗೂ ಇತರೆ ಭಾಗದಲ್ಲಿ ಆರಂಭಿಸುವ ಕೈಗಾರಿಕೆಗಳಿಗೆ ಹೆಚ್ಚು ಸಬ್ಸಿಡಿ ಹಾಗೂ ಇತರೆ ಸೌಲಭ್ಯ ನೀಡಲು ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ನಾಲ್ಕು ಜೋನ್ಗಳು:
ಜೋನ್ ಎ-ಕಲ್ಯಾಣ-ಕರ್ನಾಟಕ, ಜೋನ್ ಬಿ –ಜಿಲ್ಲಾ ಹಾಗೂ ಪುರಸಭೆ ಹೊರತುಪಡಿಸಿದ ನಗರ, ಜೋನ್ ಸಿ-ಪುರಸಭೆ ಹಾಗೂ ಜಿಲ್ಲಾ ಕೇಂದ್ರ, ಜೋನ್ ಡಿ-ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಎಂದು ಮಾಡಲಾಗಿದೆ ಎಂದು ಹೇಳಿದರು.