ಬೆಂಗಳೂರು: ಜ. 20ರಂದು ರಾಜ್ಯ ಕಾಂಗ್ರೆಸ್ ಅತ್ಯಂತ ವಿನೂತನ ಹಾಗೂ ವಿಶಿಷ್ಟ ಮಾದರಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಂದು ಕೆಪಿಸಿಸಿ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ ತಿಳಿಸಿದ್ದಾರೆ.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಬೃಹತ್ ಪ್ರತಿಭಟನೆ ಹಾಗೂ ರಾಜಭವನ ಚಲೋವನ್ನು ಕಾಂಗ್ರೆಸ್ ಕಿಸಾನ್ ಘಟಕದಿಂದ ಹಮ್ಮಿಕೊಳ್ಳಲಾಗಿದೆ.
ಜ.20 ರಂದು ಸಂಗೊಳ್ಳಿ ರಾಯಣ್ಣ ರೈಲ್ವೇ ಸ್ಟೇಷನ್ನಿಂದ ರಾಜಭವನ ಚಲೋ ಆರಂಭವಾಗಲಿದೆ. ಪ್ರತಿಭಟನೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ರೈತರು ಭಾಗಿಯಾಗುವ ನಿರೀಕ್ಷೆ ಇದೆ. ಪ್ರತಿಭಟನೆ ವೇಳೆ ಬೆಳೆಗಳನ್ನು ರಸ್ತೆಗೆ ತಂದು ಆಕ್ರೋಶ ಹೊರಹಾಕಲಿರುವ ರೈತರು, ಪ್ರತಿಭಟನಾ ಸ್ಥಳದಲ್ಲಿ ಸ್ನಾನ ಮಾಡಿ, ತಿಂಡಿ ಸಿದ್ಧಪಡಿಸಿಕೊಂಡು ಸೇವಿಸಿ ಹೋರಾಟಕ್ಕೆ ಜೀವ ತುಂಬಲಿದ್ದಾರೆ. ಆಯಾ ಪ್ರದೇಶವಾರು ವೇಷಭೂಷಣ ತೊಟ್ಟು ಪ್ರತಿಭಟನಾ ಮೆರವಣಿಗೆಯಲ್ಲಿ ರೈತರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ವಿವಿಧ ಜಿಲ್ಲೆಗಳ ರೈತರ ಪ್ರಾದೇಶಿಕ ಸಮಸ್ಯೆಗಳ ಭಿತ್ತಿಚಿತ್ರ ಪ್ರದರ್ಶನಕ್ಕೆ ನಿರ್ಧಾರ ಮಾಡಿದ್ದೇವೆ. ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ, ವಿದ್ಯುತ್ ಬಿಲ್ ತಿದ್ದುಪಡಿ ವಿರೋಧಿಸಿ ಕಾಂಗ್ರೆಸ್ ರಾಜಭವನ ಚಲೋ ನಡೆಯಲಿದೆ ಎಂದು ವಿವರಿಸಿದರು.