ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಸಿಎಂ ಬಗ್ಗೆ ಬಹಳ ಕೇವಲವಾಗಿ ಮಾತನಾಡಿದ್ದಾರೆ. ಹಳ್ಳಿಹಕ್ಕಿ ವಿಶ್ವನಾಥ್ ಅರೆಹುಚ್ಚ ಎಂದು ಹಿಂದೆ ಹೇಳಿದ್ದೆ, ಆದರೆ ಇವರು ಪೂರ್ತಿ ಹುಚ್ಚರು ಎಂದು ಬಿಡಿಎ ಅಧ್ಯಕ್ಷ ಎಸ್. ಆರ್. ವಿಶ್ವನಾಥ್ ಕಿಡಿಕಾರಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯ ವಿಚಾರಗಳನ್ನು ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ಮಾಧ್ಯಮಗಳ ಮುಂದೆ ಬಹಿರಂಗ ಮಾಡಿ, ಪಕ್ಷದ ಶಿಸ್ತನ್ನು ಉಲ್ಲಂಘಿಸಿದ್ದಾರೆ ಎಂದು ಎಸ್ ಆರ್ ವಿಶ್ವನಾಥ್ ಹರಿಹಾಯ್ದರು.
ಬಿಎಸ್ವೈಗೆ ವಯಸ್ಸಾಗಿದೆ, ಕಿವಿ ಕೇಳಿಸಲ್ಲ, ಅವರು ಸಿಎಂ ಆಗಿ ಮುಂದುವರಿಯಬಾರದು ಎಂದು ಹೆಚ್ ವಿಶ್ವನಾಥ್ ಹೇಳಿದ್ದಾರೆ. ಅಲ್ಲದೆ ಜಾತಿಯನ್ನು ಕೂಡಾ ಎತ್ತಿಕಟ್ಟುವ ಕೆಲಸವನ್ನು ಮಾಡಿದ್ದಾರೆ. ನಾನು ಈವರೆಗೆ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಿದ್ದು ಮಂತ್ರಿಗಿರಿಯನ್ನು ಕೇಳಿಲ್ಲ. ಆದರೆ ನನ್ನ ಬಗ್ಗೆಯೇ ಅವಾಚ್ಯ ಪದ ಬಳಸುವ ಮೂಲಕ ಕೀಳುಮಟ್ಟದ ಮಾತುಗಳನ್ನಾಡಿದ್ದಾರೆ ಎಂದು ಹಳ್ಳಿಹಕ್ಕಿಯ ವಿರುದ್ಧ ಆಕ್ರೋಶ ಹೊರಹಾಕಿದರು.
ಬಿಡಿಎ ಅಧ್ಯಕ್ಷನಾಗಿ ನಿಗಮದ ದುಡ್ಡು ಉಳಿಸುವ ಕೆಲಸ ಮಾಡುತ್ತಿದ್ದೇನೆ. ಆದ್ರೆ ಹೆಚ್. ವಿಶ್ವನಾಥ್ ಕೆಎಮ್ಎಫ್ ಜಾಗವನ್ನು ಬಿಡಿಸಿ ಕೊಡ್ತೇನೆ ಎಂದು ಜನರ ಬಳಿ ವಸೂಲಿ ಮಾಡಿದ್ರು. ಸುಲಿಗೆ ಮಾಡುವ ಏಜೆಂಟ್ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ದೂರಿದರು.
ಎಲ್ಲಾ ಶಾಸಕರು ಯಡಿಯೂರಪ್ಪನವರೆ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಆದರೆ ಹೆಚ್. ವಿಶ್ವನಾಥ್ ಅದರ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಪಕ್ಷದ ಇಮೇಜ್ಗೆ ಧಕ್ಕೆ ಆಗುವ ಕೆಲಸ ಮಾಡುವವರನ್ನು ಉಳಿಸಿಕೊಳ್ಳಬಾರದು ಎಂದು ಹೇಳಿದರು.
ಯಾರೂ ಅವರನ್ನು ಪಕ್ಷಕ್ಕೆ ಕರೆದಿಲ್ಲ. ಅವರು ಬಂದಿದ್ದೇ ಆಶ್ವರ್ಯ. ಕುರುಕ್ಷೇತ್ರದ ಶಕುನಿ ರೀತಿಯಲ್ಲಿ ಬಂದರು. ಈ ಪಾತ್ರ ಎಲ್ಲೇ ಇದ್ರು ಚೆನ್ನಾಗಿ ಮಾಡ್ತಾರೆ. ಹಿಂದೆ ಸಿದ್ಧರಾಮಯ್ಯ ಮಾತು ಹೇಳಿದ್ದರು, ಬಿಜೆಪಿಗೆ ಇವರೇ ಮುಳುವಾಗ್ತಾರೆ ಎಂದು, ಅದೀಗ ನಿಜವಾಗಿದೆ. ಮುಂದೆ ಯಾವ ಸಣ್ಣ ಪಕ್ಷವೂ ಅವರನ್ನು ಸೇರಿಸಿಕೊಳ್ಳುವುದಿಲ್ಲ. ಅಧಿಕಾರ ಸಿಗಲಿಲ್ಲ ಎಂದು ಇಷ್ಟೆಲ್ಲಾ ಒದ್ದಾಡ್ತಿದಾರೆ ಎಂದರು.