ಬೆಂಗಳೂರು: ಅಯೋಧ್ಯೆಯಲ್ಲಿ ನಾಳೆ ರಾಮಮಂದಿರ ನಿರ್ಮಾಣ ಸ್ಥಳದ ಭೂಮಿ ಪೂಜೆ ನಡೆಯುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸುವಂತೆ ಮುಜರಾಯಿ ಇಲಾಖೆ ಆದೇಶಿಸಿದೆ.
![Special pooje in Karnataka temple for Ram Mandir bhumi pujan](https://etvbharatimages.akamaized.net/etvbharat/prod-images/8292415_313_8292415_1596548685772.png)
ಸಿಎಂ ಯಡಿಯೂರಪ್ಪ ಸೂಚನೆ ಮೇರೆಗೆ ಭೂಮಿ ಪೂಜೆ ಕಾರ್ಯ ಸರಾಗವಾಗಿ ನೆರವೇರುವಂತೆ ಹಾಗೂ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಮಂಗಳಕರವಾಗಿ ಪೂರ್ಣಗೊಳಿಸುವಂತೆ ಮತ್ತು ತನ್ಮೂಲಕ ಭಾರತ ದೇಶದ ಎಲ್ಲಾ ಪ್ರಜೆಗಳಿಗೆ ಒಳಿತನ್ನು ಕರುಣಿಸು ಎಂದು ದೇವರಲ್ಲಿ ಪ್ರಾರ್ಥಿಸುವ ಸಲುವಾಗಿ ರಾಜ್ಯದ ಎಲ್ಲಾ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವಂತೆ ಆದೇಶಿಸಲಾಗಿದೆ.
ಜೊತೆಗೆ ರಾಜ್ಯದಲ್ಲಿನ ಎಲ್ಲಾ ಖಾಸಗಿ ದೇವಾಲಯಗಳಲ್ಲೂ ಶಿಲಾನ್ಯಾಸ ಕಾರ್ಯಕ್ರಮ ಸಂದರ್ಭದಲ್ಲಿ ಅರ್ಚಕರು ವಿಶೇಷ ಪೂಜೆ ಮತ್ತು ಪ್ರಾರ್ಥನೆ ನೆರವೇರಿಸುವಂತೆ ಸೂಚನೆ ನೀಡಲಾಗಿದೆ. ಈ ಸಂದರ್ಭ ಕೋವಿಡ್ -19 ಮುಂಜಾಗ್ರತಾ ಕ್ರಮ ಪಾಲಿಸುವಂತೆ ಅರ್ಚಕರಿಗೆ ತಿಳಿಸಲಾಗಿದೆ.