ದೊಡ್ಡಬಳ್ಳಾಪುರ: ಯುವಕರಿಗೆ ಪೊಲೀಸ್ ಅಂದರೆ ಸಾಕು ಭಯ ಮೂಡುತ್ತೆ. ಆದ್ರೆ ಪೊಲೀಸರೊಂದಿಗೆ ಯುವಕರು ಕೆಲಸ ಮಾಡುವ ಅವಕಾಶವನ್ನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರ್ ನೀಡಿದ್ದಾರೆ.
ಹೌದು, ನೂತನ ಎಸ್ಪಿ ರವಿ.ಡಿ.ಚೆನ್ನಣ್ಣನವರ್, ಟ್ರಾಫಿಕ್ ವಾರ್ಡನ್ ಅಡಿಯಲ್ಲಿ ಯುವಕರಿಗೆ ಪೊಲೀಸರೊಂದಿಗೆ ಕೆಲಸ ಮಾಡುವ ಅವಕಾಶ ನೀಡಿದ್ದಾರೆ. ಈ ಮೂಲಕ ಯುವಕರಿಗೆ ಪೊಲೀಸ್ ವ್ಯವಸ್ಥೆಯ ಬಗ್ಗೆ ತಿಳಿಸಲು ಮುಂದಾಗಿದ್ದಾರೆ. ಪೊಲೀಸರೆಂದರೆ ಭಯವಲ್ಲ, ಭರವಸೆ ಎಂಬ ಭಾವವನ್ನು ಮೂಡಿಸುತ್ತಿದ್ದಾರೆ.
ಪೊಲೀಸರ ಜೊತೆ ಕೆಲಸ ಮಾಡುವುದರಿಂದ ಎಫ್ಐಆರ್ ಎಂದರೇನು, ವಾರೆಂಟ್, ಅರೆಸ್ಟ್, ಸಮನ್ಸ್ ಬಗ್ಗೆ, ಅಪರಾಧಿಗಳನ್ನು ಹಿಡಿಯೋದು, ಅಪರಾಧ ಪತ್ತೆ ಮಾಡುವುದು ಸೇರಿದಂತೆ ಪೊಲೀಸ್ ವ್ಯವಸ್ಥೆಯ ಬಗ್ಗೆ ಯುವಕರು ತಿಳಿದುಕೊಳ್ಳುತ್ತಾರೆ.
ಸಿಟಿಜನ್ ಕಮಿಟಿ ಸದಸ್ಯನಾಗಿ, ಟ್ರಾಫಿಕ್ ವಾರ್ಡನ್ಗಳಾಗಿ ಆಗಿ ಯುವಕರನ್ನು ಸೇರಿಸಿಕೊಂಡು ಒಂದು ತಿಂಗಳ ತರಬೇತಿ ನೀಡಲಾಗುತ್ತದೆ. ವಾರದಲ್ಲಿ ಮೂರು ದಿನ ಅವರ ಬಿಡುವಿನ ವೇಳೆಯಲ್ಲಿ ಎರಡು ತಾಸುಗಳ ಕಾಲ ಕೆಲಸ ಮಾಡುವ ಅವಕಾಶ ನೀಡಲಾಗುತ್ತದೆ.
ಆಯ್ಕೆಯಾದ ಯುವಕರನ್ನು ಪೊಲೀಸರೊಂದಿಗೆ ಗಸ್ತು ಮಾಡಲು, ಅಪರಾಧಗಳನ್ನ ಪತ್ತೆ ಮಾಡಲು, ಅಪರಾಧಿಗಳನ್ನ ಹಿಡಿಯಲು ಹಾಗೂ ಸಂಚಾರಿ ನಿಯಮ ಪಾಲನೆಗಾಗಿ ನಿಯೋಜನೆ ಮಾಡಲಾಗುತ್ತದೆ. ಕ್ರಿಮಿನಲ್ ಹಿನ್ನೆಲೆ ಇಲ್ಲದ ಸದೃಢ ಹಾಗೂ 20 ವರ್ಷದಿಂದ 40 ವರ್ಷದವರನ್ನು ಟ್ರಾಫಿಕ್ ವಾರ್ಡನ್ಗಳಾಗಿ ಸೇರಿಕೊಳ್ಳಬಹುದು. ಅರ್ಜಿಗಳನ್ನ ಪೊಲೀಸ್ ಠಾಣೆಗಳಲ್ಲಿ ಕೊಡಲಾಗುತ್ತದೆ. ಈ ಮೂಲಕ ಪೊಲೀಸ್ ಇಲಾಖೆಯನ್ನ ಜನಸ್ನೇಹಿಯನ್ನಾಗಿ ಮಾಡಲು ರವಿ ಡಿ ಚೆನ್ನಣ್ಣನವರ್ ಮುಂದಾಗಿದ್ದಾರೆ.