ದೇವನಹಳ್ಳಿ: ಬಾಯಿಯಲ್ಲಿ ಎರಡು ಚಿನ್ನದ ತುಣುಕುಗಳನ್ನ ಇಟ್ಟುಕೊಂಡು ಕಳ್ಳ ಸಾಗಣೆ ಮಾಡಲು ಯತ್ನಿಸಿದ ವ್ಯಕ್ತಿಯೊನ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾನೆ.
ಚೆನ್ನೈ ಮೂಲದ 42 ವರ್ಷದ ಪ್ರಯಾಣಿಕ ಬುಧವಾರ ದುಬೈನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಈ ವೇಳೆ. ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕರನ್ನ ತಪಾಸಣೆ ಮಾಡುವ ಸಮಯದಲ್ಲಿ ಆರೋಪಿ ಬಾಯಿಯೊಳಗೆ ಚಿನ್ನದ ತುಣುಕು ಸಾಗಿಸುತ್ತಿರುವುದು ಪತ್ತೆಯಾಗಿದೆ. 100 ಗ್ರಾಂ ತೂಕದ 4.9 ಲಕ್ಷ ಮೌಲ್ಯದ ಚಿನ್ನವನ್ನ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡು ಆತನನ್ನು ವಶಕ್ಕೆ ಪಡೆದಿದ್ದಾರೆ.
ಪ್ರಯಾಣಿಕರ ತಪಾಸಣೆ ವೇಳೆ ಆರೋಪಿ ಮಾತನಾಡಲು ಕಷ್ಟಪಡುತ್ತಿದ್ದ, ಇದನ್ನ ಅಧಿಕಾರಿಗಳು ಗಮನಿಸಿ ಆತನ ಬಾಯಿ ಪರೀಕ್ಷಿಸಿದಾಗ ಚಿನ್ನದ ತುಣುಕು ಪತ್ತೆಯಾಗಿದೆ.
ವಿಮಾನದಲ್ಲಿ ಅಕ್ರಮವಾಗಿ ಚಿನ್ನ ಸಾಗಾಣಿಕೆ:
ವಿಮಾನದಲ್ಲಿ ಚಿನ್ನದ ಸಾಗಣೆ ಮಾಡುತ್ತಿದ್ದ ಜಾಲವನ್ನ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ದುಬೈನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಇಂಡಿಗೋ 6ಇ - 096 ವಿಮಾನದಲ್ಲಿ 15 ಚಿನ್ನದ ಬಿಸ್ಕೆಟ್ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಜಾಲವನ್ನ ಪತ್ತೆ ಮಾಡಲಾಗಿದೆ. 49.60 ಲಕ್ಷ ಮೌಲ್ಯದ 1.15 ಕೆಜಿ ಚಿನ್ನವನ್ನ ವಶಕ್ಕೆ ಪಡೆಯಲಾಗಿದೆ.