ಬೆಂಗಳೂರು: 2018-19 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಭೂತ ಪೂರ್ವ ಯಶಸ್ಸು ಸಾಧಿಸಿದ್ದರಿಂದ ರಾಜ್ಯಕ್ಕೆ ಮೂರನೇ ಸ್ಥಾನ ಬಂದಿದ್ದು, ಇದರಿಂದ ಜಿಲ್ಲೆಗೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ಸ್ಕೋಚ್ ಅವಾರ್ಡ್ ಒದಗಿಬಂದಿದೆ.
ಶಿಕ್ಷಣ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಭೂತಪೂರ್ವ ಯೋಜನೆಗಳನ್ನು ಕೈಗೊಂಡ ಫಲವಾಗಿ ಜಿಲ್ಲೆಯ ಫಲಿತಾಂಶವು ಶೇ. 82 ರಿಂದ 88.35 ಕ್ಕೆ ಹೆಚ್ಚಳಗೊಂಡಿತ್ತು. ಈ ಮೂಲಕ ರಾಜ್ಯದಲ್ಲಿ ಜಿಲ್ಲೆ 14ನೇ ಸ್ಥಾನದಿಂದ 3 ನೇ ಸ್ಥಾನಕ್ಕೆ ಏರಿಕೆಯಾಗಿ ಗೌರವ ಸ್ಥಾನ ಪಡೆದಿದೆ.
ಫಲಿತಾಂಶ ಸುಧಾರಣೆಗೆ ಕೈಗೊಂಡ ವಿವಿಧ ಯೋಜನಾ ತಂತ್ರಗಳ ಕುರಿತಂತೆ ನವದೆಹಲಿಯಲ್ಲಿ ವಿವಿಧ ರಾಜ್ಯಗಳಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಇದರಲ್ಲಿ ಸಿಇಒ ಆರ್ ಲತಾ ಭಾಗವಹಿಸಿದ್ದರು. ಸ್ಕೋಚ್ ಸ್ಪರ್ಧಾಳುಗಳ ಅಂತಿಮ ಸುತ್ತಿನಲ್ಲಿ ಸಿಇಒ ಲತಾ ಅವರು ಗೋಲ್ಡ್ ಮೆಡಲ್ ಪಡೆದು ಗೌರವ ಸ್ಥಾನ ಗಳಿಸಿಕೊಟ್ಟಿದ್ದಾರೆ.
ಇನ್ನು ಈ ಪ್ರಶಸ್ತಿಗೆ ಕಾರಣಕರ್ತರಾದ ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ಸಿಇಒ ಅಭಿನಂದಿಸಿದರೆ, ಸ್ಕೋಚ್ ಅವಾರ್ಡ್ ಲಭಿಸಲು ಕಾರಣವಾದ ಸಿಇಒ ಅವರಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದ ಸಲ್ಲಿಸಿದ್ದಾರೆ.