ಬೆಂಗಳೂರು : ನಾವು ಅಧಿಕಾರಕ್ಕೆ ಬಂದರೆ ಒಂದೇ ವಾರದಲ್ಲಿ ಮತಾಂತರ ನಿಷೇಧ ವಿಧೇಯಕ ಹಿಂಪಡೆಯುತ್ತೇವೆ. ಮೊದಲ ಅಧಿವೇಶನದಲ್ಲೇ ಹಿಂಪಡೆದು ಎಸೆಯುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ಸದನದಲ್ಲಿ ನೂರಕ್ಕೆ ನೂರರಷ್ಟು ಈ ಕಾನೂನನ್ನು ವಾಪಸ್ ಪಡೆದು ಎಸೆಯುತ್ತೇವೆ ಎಂದು ಹೇಳಿದರು.
ಬಿಜೆಪಿ ಅಂದರೆ ಬರೀ ಸುಳ್ಳು. ವಿಧೇಯಕದ ಡ್ರಾಫ್ಟ್‌ಗೆ ನಾನು ಸಹಿ ಮಾಡಿದ್ದನ್ನೇ ಬಿಜೆಪಿ ಅಜೆಂಡಾ ಮಾಡಿಕೊಂಡಿದೆ. ಇದು ಹುಟ್ಟಿದ್ದು 2009ರಲ್ಲಿ ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ. ಜಯಚಂದ್ರ ಸಹಿ ಹಾಕಿ, ನಾನು ಕ್ಯಾಬಿನೆಟ್ ಮುಂದೆ ತನ್ನಿ ಅಂದಿದ್ದು ನಿಜ.
ಆದರೆ, ಬಳಿಕ ನಾನು ಆಗಿನ ಸಮಾಜಕಲ್ಯಾಣ ಸಚಿವ ಆಂಜನೇಯಗೆ ಹೇಳಿ ಅದನ್ನ ಸ್ಟಾಪ್ ಮಾಡುವಂತೆ ಹೇಳಿದ್ದೆ. ನಾನು ಹೇಳಿದ ತಕ್ಷಣ ಆಂಜನೇಯ ಇದು ಅಗತ್ಯವಿಲ್ಲ ಎಂದು ಫೈಲ್ನಲ್ಲಿ ಬರೆದು ಕ್ಯಾಬಿನೆಟ್ಗೆ ತಂದಿಲ್ಲ. ಅದು ಅಲ್ಲಿಗೆ ಸತ್ತು ಹೋಗಿತ್ತು. ಬಿಜೆಪಿಯವರು ವಾಸ್ತವ ಹೇಳ್ತಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ರಾಜಕೀಯ ಚಳುವಳಿ ಅಲ್ಲ: ಡಿ.ಕೆ.ಶಿವಕುಮಾರ್
ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ನನಗೆ ಮಾಹಿತಿಯಿಲ್ಲ. ಅಧಿಕಾರವೇ ನಡೆಯುತ್ತಿಲ್ಲ. ಅಧಿಕಾರಿಗಳು ಲಂಚ ಕೊಟ್ಟು ಬಂದಿದ್ದಾರೆ ಎಂದರು.
ಪಾದಯಾತ್ರೆಗೆ ಕೊರೊನಾ ನಿಯಮ ಅಡ್ಡಿಯಾಗುತ್ತಾ ಎಂಬ ಪ್ರಶ್ನೆಗೆ, ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪಾದಯಾತ್ರೆ ನಡೆಸುತ್ತೇವೆ. ಬಿಜೆಪಿ ಜನಾಶೀರ್ವಾದ ಯಾತ್ರೆ ಮಾಡಲಿಲ್ಲವೇ? ನಮಗೆ ಒಂದು ಕಾನೂನು ಅವರಿಗೆ ಒಂದು ಕಾನೂನಾ ಎಂದು ಪ್ರಶ್ನಿಸಿದರು.