ಬೆಂಗಳೂರು : ಕೋವಿಡ್ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ರಾಜಕೀಯ ಮಾಡುವುದನ್ನು ಬಿಡಬೇಕು ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಮನವಿ ಮಾಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ. ಅವರಿಗೆ ಟೀಕೆ ಮಾಡುವ ಹಕ್ಕು ಇದೆ. ಆದರೆ ಉದ್ದೇಶಪೂರ್ವಕವಾಗಿ ಆರೋಪ ಮಾಡುವುದು ಸರಿಯಲ್ಲ ಎಂದರು.
ಕೋವಿಡ್ ವಿಚಾರದಲ್ಲಿ ಯಾರೂ ಸಹ ರಾಜಕೀಯ ಮಾಡಬಾರದು. ಉದಾಹರಣೆಗೆ ಕೇಂದ್ರದ ಗೃಹ ಮಂತ್ರಿ ಅಮಿತ್ ಶಾ, ದೆಹಲಿ ಮುಖ್ಯಮಂತ್ರಿಗೆ ಕೊರೊನಾ ನಿಯಂತ್ರಣ ಮಾಡಲು ಸಂಪೂರ್ಣ ಸಹಕಾರ ನೀಡಿದ್ದಾರೆ. ಅದೇ ರೀತಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಹ ಕ್ಷೇತ್ರಗಳಿಗೆ ಹೋಗಿ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರನ್ನು ನೋಡಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಲಿಯಬೇಕು ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ಸರ್ಕಾರ ಹಾಗೂ ಹೆಚ್. ಡಿ ಕುಮಾರಸ್ವಾಮಿ ಸರ್ಕಾರ ಇದ್ದಾಗ, ವೇತನ ಹೆಚ್ಚಳಕ್ಕಾಗಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಬೀದಿಯಲ್ಲಿ ಹೋರಾಟ ಮಾಡಿದ್ದರು. ಆಗ ಯಾರಾದರೂ ಸಂಬಳ ಜಾಸ್ತಿ ಮಾಡಿದ್ರಾ? ಯಡಿಯೂರಪ್ಪ ಮುಖ್ಯಮಂತ್ರಿ ಆದ ಮೇಲೆ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳವಾಯಿತು. ಕೇಂದ್ರ ಸರ್ಕಾರ ಸಹ ಅವರಿಗೆ ವೇತನ ಹೆಚ್ಚು ಮಾಡಿತು ಎಂದು ಹೇಳಿದರು.
ಬಿಜೆಪಿ ಸರ್ಕಾರದ್ದು ಸರ್ವಾಧಿಕಾರ ಅಂತಾರೆ. ಎಷ್ಟು ಬಾರಿ ನಾವು ವಿಪಕ್ಷ ನಾಯಕರ ಸಲಹೆಗಳನ್ನು ಪಡೆದಿಲ್ಲ. ಅವರ ಸಲಹೆ ಪಡೆದುಕೊಂಡೇ ಅನುದಾನ ಬಿಡುಗಡೆ ಮಾಡಿದ್ದು. ಕರ್ನಾಟಕ ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸವಿದೆ. ಕೋವಿಡ್ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಚಿವರು ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಇನ್ನು ಬೇಕಾದರೆ ದಾಖಲೆ ಕೊಡೋಕೆ ತಯಾರಿದ್ದೇವೆ. ಎಳ್ಳಷ್ಟೂ ಕೂಡ ಇದರಲ್ಲಿ ಬ್ರಷ್ಟಾಚಾರ ಆಗಿಲ್ಲ. ಜನರನ್ನು ದಾರಿತಪ್ಪಿಸುವ ಹೇಳಿಕೆಗಳನ್ನು ವಿಪಕ್ಷ ನಾಯಕರು ನೀಡುತ್ತಿದ್ದಾರೆ. ಸಂಬಂಧಪಟ್ಟ ಸಚಿವರು, ಅಧಿಕಾರಿಗಳು ಎಲ್ಲಾ ಇದ್ದಾರೆ. ಅವರಿಗೆ ಅಂಕಿ-ಅಂಶಗಳು ಖಂಡಿತಾ ಸಿಗುತ್ತದೆ. ಅವಸರ ಏಕೆ ಎಂದು ಪ್ರಶ್ನಿಸಿದರು.