ಬೆಂಗಳೂರು: ಆಧಾರ್ ಕಾರ್ಡ್ ಇಲ್ಲದೆ ಇರುವ ಹಿರಿಯ ನಾಗರಿಕರಿಗೆ ಆದ್ಯತೆಯ ಮೇರೆಗೆ ಕೋವಿಡ್ ಲಸಿಕೆಯನ್ನು ನೀಡಲು ಆರೋಗ್ಯ ಸಚಿವರಿಗೆ ಮನವಿ ಮಾಡಲಾಗಿದ್ದು, ಶೀಘ್ರವೇ ಲಸಿಕೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ. ಸುಧಾಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು, ಸಮಗ್ರ ಮಕ್ಕಳ ರಕ್ಷಣಾ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರನ್ನು ಕೊರೊನಾ ಸೇನಾನಿಗಳೆಂದು ಭಾವಿಸಿ ಅವರಿಗೂ ಲಸಿಕೆಯನ್ನು ನೀಡಬೇಕು ಹಾಗೂ ಹೈಕೋರ್ಟ್ ಆದೇಶದಂತೆ ಹಿರಿಯ ನಾಗರಿಕರಿಗೆ ಹಾಗೂ ವಿಕಲ ಚೇತನರಿಗೆ ಆದ್ಯತೆಯ ಮೇರೆಗೆ ವ್ಯಾಕ್ಸಿನ್ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ಪ್ರಮುಖವಾಗಿ ಎಲ್ಲಾ ಜಿಲ್ಲಾ ಹಾಗೂ ತಾಲೂಕಾ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಮಕ್ಕಳಿಗಾಗಿ ಬೆಡ್ ಕಾಯ್ದಿರಿಸುವಂತೆ ಮನವಿ ಮಾಡಿದರು. ಮನವಿ ಸ್ವೀಕರಿಸಿದ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರವೇ ಇವುಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.