ಬೆಂಗಳೂರು: ನಗರ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರು ಕಮೀಷನರ್ ಆಗಲು ಲಾಬಿ ನಡೆಸಿದ್ದಾರೆ ಎನ್ನಲಾದ ಆಡಿಯೋ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈ ಸಂಬಂಧ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ವ್ಯಕ್ತಿವೋರ್ವನ ಜೊತೆಗೆ ಭಾಸ್ಕರ್ ರಾವ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ, ಕಳೆದ ಶುಕ್ರವಾರ ವೈರಲ್ ಆಗಿ ಸಂಚಲನ ಸೃಷ್ಟಿಸಿತ್ತು. ಈ ಸಂಬಂಧ ಆಯುಕ್ತ ಭಾಸ್ಕರ್ ರಾವ್, ಆಡಿಯೋ ಮೂಲದ ಸೂಕ್ತ ತನಿಖೆ ನಡೆಸಿ ಮೂರು ದಿನದೊಳಗೆ ವರದಿ ನೀಡಿ ಎಂದು ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ಗೆ ಆದೇಶಿಸಿದ್ದರು.
ಆಡಿಯೋ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಪ್ರಕರಣದ ಹಿಂದೆ ಉದ್ದೇಶಪೂರ್ವಕವಾಗಿಯೇ ಫೋನ್ ಕದ್ದಾಲಿಕೆ ನಡೆದಿದೆಯಾ ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ನಗರ ಜಂಟಿ ಪೊಲೀಸ್ ಆಯುಕ್ತರೊಬ್ಬರ ಆದೇಶದ ಮೇರೆಗೆ ಸಿಸಿಬಿ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಅನ್ನೋದು ಮೂಲಗಳಿಂದ ತಿಳಿದುಬಂದಿದೆ.
ಫೋನ್ ಕದ್ದಾಲಿಕೆ ನಡೆಸಿದ್ದಾರೆ ಎಂಬ ಶಂಕೆ ಮೇರೆಗೆ ಐಪಿಎಸ್ ಅಧಿಕಾರಿವೋರ್ವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದು, ನೋಟಿಸ್ಗೆ ಸ್ಪಂದಿಸಿದ್ದಾರೆ ಎನ್ನಲಾದ ಆ ಐಪಿಎಸ್ ಅಧಿಕಾರಿ ವಿಚಾರಣೆಗೆ ಹಾಜರಾಗುವುದಾಗಿ ಪ್ರಕರಣದ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗ್ತಿದೆ.
ಈ ಬಗ್ಗೆ ಮಾತನಾಡಿರುವ ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಪ್ರಕರಣವು ತನಿಖಾ ಹಂತದಲ್ಲಿದೆ. ಈ ಹಂತದಲ್ಲಿ ಏನನ್ನೂ ಹೇಳಲು ಬಯಸುವುದಿಲ್ಲ. ಶೀಘ್ರದಲ್ಲಿ ತನಿಖೆ ಪೂರ್ಣಗೊಳಿಸಿ, ನಂತರ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದಷ್ಟೇ ಹೇಳಿ ಕರೆ ಸ್ಥಗಿತಗೊಳಿಸಿದರು.
ಇನ್ನು ತಮ್ಮ ಮೇಲೆ ಆರೋಪ ಬಂದಿರುವ ಬಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಕ್ರಿಯಿಸಿದ್ದು, ಪ್ರಕರಣದ ತನಿಖೆ ನಡೆಸುವಂತೆ ಜಂಟಿ ಪೊಲೀಸ್ ಆಯುಕ್ತರಿಗೆ ಆದೇಶಿಸಿದ್ದೆ. ಪ್ರಕರಣದಲ್ಲಿ ಯಾರಿಗೆ ನೋಟಿಸ್ ಕೊಟ್ಟಿದ್ದಾರೆ ಹಾಗೂ ಯಾರನ್ನೆಲ್ಲಾ ವಿಚಾರಣೆಗೆ ಒಳಪಡಿಸಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ತನಿಖಾ ವರದಿ ಬಂದ ಬಳಿಕವಷ್ಟೇ ಮಾತನಾಡುತ್ತೇನೆ ಎಂದಿದ್ದಾರೆ.