ಬೆಂಗಳೂರು: ಬಿಬಿಎಂಪಿಯ ಮೈತ್ರಿ ಆಡಳಿತದ ಅವಧಿಯಲ್ಲಿ ಬೃಹತ್ ನೀರುಗಾಲುವೆ ವಿಭಾಗದಲ್ಲಿ ಭಾರೀ ಹಗರಣ ನಡೆದಿದೆ ಎಂದು ನಗರ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ಈ ಇಲಾಖೆಯ ಮುಖ್ಯ ಅಭಿಯಂತರರಾದ ಪ್ರಹ್ಲಾದ್ ಸೇರಿದಂತೆ ಎಲ್ಲಾ 8 ವಲಯಗಳ ಬೃಹತ್ ನೀರುಗಾಲುವೆ ಇಲಾಖೆಯ ಎಲ್ಲಾ ಇಂಜಿನಿಯರ್ಗಳ ವಿರುದ್ಧ ಎಸಿಬಿಗೆ ದೂರು ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ 9 ವಿಭಾಗಗಳಲ್ಲಿ 210.91 ಕಿ.ಮೀ. ಉದ್ದದ ರಾಜಕಾಲುವೆಯಲ್ಲಿ ಒಟ್ಟು 6,49,600 ಕ್ಯೂಬಿಕ್ ಮೀಟರ್ನಷ್ಟು ಬೃಹತ್ ಪ್ರಮಾಣದ ಹೂಳನ್ನು ಹೊರತೆಗೆದಿರುವುದಾಗಿ ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ಒಟ್ಟು 29 ಕೋಟಿ ರೂಪಾಯಿಗಳಷ್ಟು ಹಣ ವೆಚ್ಚ ಮಾಡಲಾಗಿದೆ ಎಂದಿದ್ದಾರೆ. ಆದರೆ ಇಷ್ಟು ಪ್ರಮಾಣದ ಹೂಳು ತೆಗೆದರೆ ನಂದಿ ಬೆಟ್ಟದಷ್ಟಾಗುತ್ತಿತ್ತು. ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ. ಪಾಲಿಕೆಯಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿದೆ ಎಂದು ದೂರಿದರು.
ಅಲ್ಲದೆ ರಾಜಕಾಲುವೆ ಜಾಗವನ್ನು ಒತ್ತುವರಿ ಮಾಡಿಕೊಂಡು ಪ್ರಹ್ಲಾದ್ ತಮ್ಮ ಮನೆ ನಿರ್ಮಿಸಿದ್ದಾರೆ. ಹೆಬ್ಬಾಳ ಕಣಿವೆ ವ್ಯಾಪ್ತಿಯ ಗಂಗೇನಹಳ್ಳಿ ಬಳಿಯ ವಾರ್ಡ್ ಸಂಖ್ಯೆ - 21ರ ವೇಣುಗೋಪಾಲ ನಗರ ಬಡಾವಣೆಯ ನಿವೇಶನ ಸಂಖ್ಯೆ 58ರಲ್ಲಿ ಈ ಕಟ್ಟಡವಿದೆ ಎಂದರು.
ಅಷ್ಟೇ ಅಲ್ಲದೆ ಪಾಲಿಕೆ ವ್ಯಾಪ್ತಿಯ 4 ರಾಜಕಾಲುವೆಗಳಿಗೆ ಸಂಬಂಧಿಸಿದ ರಾಜಕಾಲುವೆ ಪುನಶ್ಚೇತನ ಕಾರ್ಯಕ್ಕೆಂದು 6 ಪ್ಯಾಕೇಜ್ಗಳಲ್ಲಿ ಒಟ್ಟು 800 ಕೋಟಿ ರೂ. ಮೊತ್ತದ ಟೆಂಡರ್ಗಳನ್ನು 2016-17ನೇ ಸಾಲಿನಲ್ಲಿ ಕರೆಯಲಾಗಿದೆ. ಇದರಲ್ಲೂ ಬೃಹತ್ ಪ್ರಮಾಣದ ಹಗರಣ ನಡೆದಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಸಿಐಡಿಗೆ ವಹಿಸುವಂತೆ ಒತ್ತಾಯಿಸಲಾಗಿದೆ ಎಂದರು.