ಬೆಂಗಳೂರು: ಶಿವಮೊಗ್ಗ, ಉಡುಪಿ ಹಾಗು ದಾವಣಗೆರೆ ಜಿಲ್ಲೆಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ತಾರಕಕ್ಕೇರುತ್ತಿದೆ. ಹಿಜಾಬ್ ವಿಚಾರವಾಗಿ ಉಡುಪಿಯಲ್ಲಿ ನಡೆದ ಘರ್ಷಣೆಯಲ್ಲಿ ಕೆಲವು ವಿದ್ಯಾರ್ಥಿಗಳು ಗಾಯಗೊಂಡ ಘಟನೆಗಳು ನಡೆದಿವೆ.
ಸದ್ಯ ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿಚಾರವಾಗಿ ಸರಿಗಮಪ ಖ್ಯಾತಿಯ ಗಾಯಕಿ ಸುಹಾನ ಸೈಯದ್ ಧ್ವನಿ ಎತ್ತಿದ್ದಾರೆ. 'ನಾನು ಇಸ್ಲಾಂ ಕುಟುಂಬದಲ್ಲೇ ಬೆಳೆದಿರುವವಳು, ಅದರೆ ನಾನು ಹಿಜಾಬ್ ಹಾಕಲ್ಲ. ಹಾಗಂತ ನಾನು ಹಿಜಾಬ್ ಹಾಕುವವರ ವಿರೋಧಿಯಂತೂ ಅಲ್ಲ. ಬಟ್ಟೆ ಅನ್ನೋದು ಅವರವರ ವೈಯಕ್ತಿಕ ಹಾಗೂ ಅವರವರ ಸ್ವಾತಂತ್ರ್ಯದ ವಿಚಾರ' ಎಂದಿದ್ದಾರೆ.
'ನಾನು ಹಿಜಾಬ್ ಹಾಕಲ್ಲ ಅಂತ ನನ್ನ ಪರ, ವಿರೋಧ ಚರ್ಚೆಗಳಾಗಿವೆ. ಹಿಜಾಬ್ ಆಗಲಿ, ಬೇರೆ ಬಟ್ಟೆಯನ್ನಾಗಲಿ ಇದನ್ನು ಹಾಕಬೇಕು, ಹಾಕಬಾರದು ಅಂತ ಒತ್ತಾಯ ಮಾಡೋ ಹಕ್ಕು ಯಾರಿಗೂ ಇಲ್ಲ. ಆದರೆ ನಾವಿಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಮಾತನಾಡ್ತಿದ್ದೀವಿ. ಹಿಜಾಬ್ ವಿಚಾರದಲ್ಲಿ ಇದು ನನ್ನ ವೈಯಕ್ತಿಕ ನಿಲುವು' ಎಂದು ಸುಹಾನಾ ಹೇಳಿದ್ದಾರೆ.
'ಶಿಕ್ಷಣ ಅನ್ನೋದು ಧರ್ಮವನ್ನು ಮೀರಿದ್ದು. ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳುವ ಹಕ್ಕು, ಯಾವುದೇ ಭಾಷೆ, ಧರ್ಮ, ಜಾತಿ, ಲಿಂಗ, ಬಟ್ಟೆಗೆ ಇಲ್ಲ. ಈ ಕಾರಣಗಳಿಂದ ಹೆಣ್ಣು ಮಕ್ಕಳು ಶಿಕ್ಷಣ ವಂಚಿತರಾಗ್ತಾರೆ ಅಂದ್ರೆ ಅದು ತಪ್ಪು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ' ಎಂದಿದ್ದಾರೆ.
'ಇನ್ನು ಸ್ವಾಮಿ ವಿವೇಕಾನಂದ ಅವರೇ ಹೇಳಿದ್ದಾರೆ. ನಿಮ್ಮ ಮನೆಯ ಹೆಣ್ಣು ಮಕ್ಕಳನ್ನು ಓದಿಸಿ. ಅವಳ ನಿರ್ಧಾರ ಅವಳು ತೆಗೆದುಕೊಳ್ತಾಳೆ. ಯಾವುದು ಸರಿ?, ಯಾವುದು ತಪ್ಪು?, ಅಂತ ಅವಳೇ ಹೇಳ್ತಾಳೆ. ಅದನ್ನು ಕೇಳೋಕೆ ನೀವು ಯಾರು? ಅಂತ. ಮುಂಚೆ ಹೆಣ್ಣು ಮಕ್ಕಳು ಮನೆಯಿಂದ ಹೊರ ಬಂದು ಓದೋಕೆ ಧೈರ್ಯ ಮಾಡ್ತಿರಲಿಲ್ಲ. ಅಂಥದ್ರಲ್ಲಿ ಈಗ ವಿದ್ಯಾಭ್ಯಾಸ ಮಾಡೋಕೆ ಬರ್ತಿದ್ದಾರೆ. ಅದನ್ನು ನೋಡಿ ನಾವು ಖುಷಿ ಪಡಬೇಕು. ಅದನ್ನು ಬಿಟ್ಟು ಬೇರೆ ಸಣ್ಣ ಪುಟ್ಟ ವಿಚಾರಗಳಿಂದ ಅವಳನ್ನು ತಡೀಬಾರದು. ನಾನು ಒಂದು ಹೆಣ್ಣಾಗಿ ಶಿಕ್ಷಣದ ಮಹತ್ವ ಏನು ಅಂತ ನನಗೆ ಗೊತ್ತು' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ಓದಬೇಕು ಅಂತಿರೋ ಎಲ್ಲಾ ಹೆಣ್ಣು ಮಕ್ಕಳ ಪರ ನಾನಿದ್ದೀನಿ. ವಿದ್ಯೆ ಅನ್ನೋದು ಎಲ್ಲರ ಹಕ್ಕು. ಅದು ಎಲ್ಲರಿಗೂ ಸಿಗಬೇಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ' ಎಂದು ಸುಹಾನಾ ಸೈಯದ್ ಹೇಳಿದ್ದಾರೆ.