ಬೆಂಗಳೂರು: 'ನಾ ಕೊಡೆ ನೀ ಬಿಡೆ' ಎಂಬ ಪರಿಸ್ಥಿತಿ ಸದ್ಯ ಸರ್ಕಾರ ಹಾಗು ನಿವಾಸಿ ವೈದ್ಯರ ನಡುವೆ ಗುದ್ದಾಟ ನಡೆಯುತ್ತಿದೆ.
ನ. 29(ಸೋಮವಾರ)ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ವೈದ್ಯರು ನಿನ್ನೆ (ಮಂಗಳವಾರ) ಕೂಡ ವಿಕ್ಟೋರಿಯಾ ಕ್ಯಾಂಪಸ್ನಿಂದ ಟೌನ್ ಹಾಲ್ ವರೆಗೆ ಜಾಥಾ ನಡೆಸಿ ಸರ್ಕಾರದ ಗಮನ ಸೆಳೆದರು.
ವೈದ್ಯರ ಬೇಡಿಕೆಗಳಾದ 2018-19 ಶೈಕ್ಷಣಿಕ ವರ್ಷದ ಪ್ರಕಾರ ಶೈಕ್ಷಣಿಕ ಶುಲ್ಕವನ್ನು ಪುನರ್ ರಚಿಸಬೇಕು, ಕೋವಿಡ್ ಅಪಾಯ ಭತ್ಯೆಗೆ ಹಣವನ್ನು ಮಂಜೂರು ಮಾಡಬೇಕು, ನೀಟ್ ಪಿಜಿ ಕೌನ್ಸೆಲಿಂಗ್ ಆದಷ್ಟು ಬೇಗ ಮಾಡುವಂತೆ ಆಗ್ರಹಿಸಿದ್ದಾರೆ.
ಮಂಗಳವಾರ ಪ್ರತಿಭಟನಾನಿರತರು ಸಚಿವ ಡಾ. ಸುಧಾಕರ್ ಅವರನ್ನು ಭೇಟಿ ಮಾಡಿ, ಶೈಕ್ಷಣಿಕ ಶುಲ್ಕ ಕಡಿತದ ಬಗ್ಗೆ ಚರ್ಚಿಸಿದ್ದಾರೆ. ಆದರೆ ಅದು ಆಗದು ಎಂಬ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಭತ್ಯೆಗೆ ಸಂಬಂಧಿಸಿದಂತೆ ಮುಂದಿನ 7-15 ದಿನಗಳಲ್ಲಿ ನಿರ್ಧಾರ ತಿಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಹೀಗಾಗಿ, ಈ ಭರವಸೆಗಳಿಗೆ ಮಣಿಯದ ವೈದ್ಯರು ಎಲ್ಲಾ ಬೇಡಿಕೆಗಳು ಈಡೇರುವವರೆಗೂ ಈ ಮುಷ್ಕರ ಮುಂದುವರರೆಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ತುರ್ತು ಸೇವೆ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಆರೋಗ್ಯ ಸಚಿವರಿಂದ ಮತ್ತೆ ಭರವಸೆ ಮಾತು.. ಪ್ರತಿಭಟನೆ ಮುಂದುವರಿಸಲು ಸಜ್ಜಾದ ವೈದ್ಯರು