ಬೆಂಗಳೂರು: ಸರ್ಕಾರಿ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಸಮತಲ ಮೀಸಲು ಒದಗಿಸುವ ಕುರಿತು ರಾಜ್ಯ ಸರ್ಕಾರ ತನ್ನ ನಿಲುವು ತಿಳಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ತೃತೀಯ ಲಿಂಗಿಗಳ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಸಂಗಮ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ, ಈ ಕುರಿತು ನವೆಂಬರ್ 9ರೊಳಗೆ ಸರ್ಕಾರ ತನ್ನ ನಿಲುವು ತಿಳಿಸಬೇಕು ಎಂದು ಸೂಚಿಸಿದೆ.
ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಮೀಸಲು ನೀಡಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸಿದ್ದ ರಾಜ್ಯ ಸರ್ಕಾರ, ಒಬಿಸಿ ಅಡಿ ಮೀಸಲು ಕಲ್ಪಿಸುವುದಾಗಿ ಪ್ರಮಾಣ ಪತ್ರವನ್ನು ಸಲ್ಲಿಸಿತ್ತು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅನುಮತಿ ಪಡೆದು ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಕ್ಯಾಟಗರಿ ಅಡಿ ಮೀಸಲು ಕಲ್ಪಿಸುವ ಕುರಿತು ಪರಿಶೀಲಿಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿತ್ತು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅರ್ಜಿದಾರರ ಪರ ವಕೀಲರು, ಒಬಿಸಿ ಅಡಿ ಮೀಸಲು ಕಲ್ಪಿಸುವುದರಿಂದ ಪ್ರಯೋಜನವಾಗುವುದಿಲ್ಲ. ಹೀಗಾಗಿ ಮಹಿಳೆಯರು, ವಿಶೇಷ ಚೇತನರು ಹಾಗೂ ಇತರರಿಗೆ ನೀಡಿರುವಂತೆ ಪ್ರತ್ಯೇಕ ಕ್ಯಾಟಗರಿ ಅಡಿ ಸಮತಲ ಮೀಸಲು (ಹಾರಿಜಂಟಲ್ ರಿಸರ್ವೇಷನ್) ಒದಗಿಸಿಕೊಡಬೇಕು ಎಂದು ಪೀಠವನ್ನು ಕೋರಿದರು. ಅಲ್ಲದೆ, ಒಬಿಸಿ ಕ್ಯಾಟಗರಿ ಅಡಿ ಮೀಸಲು ನೀಡಿದರೆ ಆಗ ತೃತೀಯ ಲಿಂಗಿ ಎಸ್ಸಿ, ಎಸ್ಟಿಗಳಿಗೆ ಅವಕಾಶ ಸಿಗುವುದಿಲ್ಲ. ಅವರು ಮೀಸಲು ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ.
ಇದೇ ವಿಚಾರವಾಗಿ ವ್ಯಾಜ್ಯ ಉಂಟಾದಾಗ ತಮಿಳುನಾಡು ಸರ್ಕಾರ ಅತ್ಯಂತ ಹಿಂದುಳಿದ ವರ್ಗದ ಕ್ಯಾಟಗರಿಯಲ್ಲಿ ತೃತೀಯ ಲಿಂಗಿಗಳಿಗೆ ಮೀಸಲು ನೀಡಿತ್ತು. ಆದರೆ, ಮದ್ರಾಸ್ ಹೈಕೋರ್ಟ್ ಅದು ಸರಿಯಲ್ಲ. ನೇರ ಮೀಸಲು ನೀಡಬೇಕು ಎಂದು ಆದೇಶಿಸಿದೆ ಎಂಬ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದರು. ವಕೀಲರ ವಾದ ಆಲಿಸಿದ ಪೀಠ, ಸರ್ಕಾರ ನಿಲುವನ್ನು ಮರು ಪರಿಶೀಲಿಸಿ, ನಿಲುವು ಸ್ಪಷ್ಟಪಡಿಸಬೇಕು ಎಂದು ನಿರ್ದೇಶಿಸಿದೆ.