ಬೆಂಗಳೂರು: ಸಚಿವ ಸ್ಥಾನಕ್ಕಾಗಿ ನಾನು ಲಾಬಿ ಮಾಡಿಲ್ಲ.ಲಾಬಿ ಮಾಡಿದವರು ಸಚಿವರಾಗುತ್ತಿದ್ದಾರೆ. ಬೆಂಗಳೂರು, ಬೆಳಗಾವಿಗೆ ಅಷ್ಟೇ ಸೀಮಿತ ಸರ್ಕಾರವೇ ಎಂದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.
ಸೆವೆನ್ ಮಿನಿಸ್ಟರ್ ಕ್ವಾಟ್ರಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕ, ಮದ್ಯ ಕರ್ನಾಟಕ, ಕರಾವಳಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ನಮ್ಮ ಕ್ಷೇತ್ರದ ಜನಕ್ಕೆ ಅವಮಾನ ಮಾಡುತ್ತಿದ್ದಾರೆ. ನಮ್ಮ ಜಿಲ್ಲೆಗೆ ಅವಕಾಶ ಸಿಕ್ಕಿಲ್ಲ,ಸರ್ಕಾರ ಎಂದರೆ ಪ್ರದೇಶವಾರು, ಭೌಗೋಳಿಕವಾಗಿ, ಸಾಮಾಜಿಕವಾಗಿ ಸಂಪುಟದಲ್ಲಿ ಅವಕಾಶ ಇರಬೇಕು ಆದರೆ ಇದು ಬೆಂಗಳೂರು , ಬೆಳಗಾವಿ ಕ್ಯಾಬಿನೆಟ್ ಆಗಿದೆ ಎಂದು ಕಟುಕಿದರು.
ಸಚಿವ ಸ್ಥಾನಕ್ಕಾಗಿ ನಾನು ಅರ್ಜಿ ಹಾಕಿಲ್ಲ, ಈಗ ಯಾರು ಯಾರಿಗೆ ಸಿಕ್ಕಿದೆ ಎಂದು ನನಗೆ ಯಾವುದೇ ಮಾಹಿತಿ ಇಲ್ಲ, ಲಾಬಿಯನ್ನೂ ಮಾಡಿಲ್ಲ. ನನ್ನನ್ನು ಕ್ಷೇತ್ರದ ಜನ ಮೂರು ಬಾರಿ ಆಯ್ಕೆ ಮಾಡಿದ್ದಾರೆ. ಒಮ್ಮೆ ಸೋಲು ಕಂಡಿದ್ದು ಸ್ವಲ್ಪ ಹಿನ್ನಡೆ ಆಗಿತ್ತು, ಅದು ನನ್ನ ಸ್ವಯಂಕೃತ ಅಪರಾಧ ಆಗಿತ್ತು. ಕ್ಷೇತ್ರದಲ್ಲಿ ನಾನು ಮಾಡಿದ್ದ ಅಭಿವೃದ್ಧಿ ಕೆಲಸ ನೋಡಿ ಮತದಾರು ಈ ಬಾರಿ ನನ್ನ ಕೈಬಿಡಲಿಲ್ಲ. ಅವರೇ ನನಗೆ ದಾರಿದೀಪ, ಆದರ್ಶ, ಜನರ ಮಧ್ಯದಲ್ಲಿದ್ದು ಕೆಲಸ ಮಾಡುತ್ತಿದ್ದೇನೆ. ಕೊರೊನಾ ವೇಳೆಯಲ್ಲಿಯೂ ಜನರ ಜೊತೆಯಲ್ಲಿಯೇ ಇದ್ದವನು ನಾನು, ಎಂದು ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದರು.