ಬೆಂಗಳೂರು: ರಾಜ್ಯಾದ್ಯಂತ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಸಂಬಂಧ ಕ್ರಮ ಕೈಗೊಂಡ ವರದಿ ಸಲ್ಲಿಸಬೇಕಿದ್ದ ರಾಜ್ಯ ಸರ್ಕಾರ, ಹೈಕೋರ್ಟ್ನಿಂದ ಮತ್ತೆ ನಾಲ್ಕು ವಾರ ಕಾಲಾವಕಾಶ ಪಡೆದಿದೆ. ಹಾಗಾಗಿ ಸರ್ಕಾರ ಮತ್ತು ಬಿಬಿಎಂಪಿಗೆ ಈ ವಿಚಾರದಲ್ಲಿ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ನಿಗದಿಯಂತೆ ಸರ್ಕಾರ ಅನಧಿಕೃತ ಧಾರ್ಮಿಕ ಕೇಂದ್ರಗಳ ವಿರುದ್ಧ ಕ್ರಮ ಕೈಗೊಂಡ ಬಗ್ಗೆ ಹೈಕೋರ್ಟ್ಗೆ ಸೆ.17ಕ್ಕೆ ವರದಿ ಸಲ್ಲಿಸಬೇಕಿತ್ತು. ಆದರೆ, ಎಜಿ ಸಮಯ ಕೋರಿದ್ದರಿಂದ ನ್ಯಾಯಾಲಯ ವಿಚಾರಣೆಯನ್ನು ಅ.4ಕ್ಕೆ ಮುಂದೂಡಿತು.
ಸುಪ್ರೀಂಕೋರ್ಟ್ ನಿರ್ದೇಶನ ಜಾರಿಗಾಗಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಸಿಜೆ ಎಸ್. ಸಿ ಶರ್ಮಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರಿ ವಕೀಲರು, ನ್ಯಾಯಾಲಯದ ನಿರ್ದೇಶನದಂತೆ ಕ್ರಮ ಕೈಗೊಂಡ ಬಗ್ಗೆ ವರದಿ ಸಲ್ಲಿಸಲು ನಾಲ್ಕು ವಾರ ಕಾಲಾವಕಾಶ ನೀಡಬೇಕೆಂದು ಕೋರಿದರು. ಅದಕ್ಕೆ ನ್ಯಾಯಾಲಯ ಸಮ್ಮತಿಸಿ ವಿಚಾರಣೆ ಮುಂದೂಡಿತು.
ಸರ್ಕಾರ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ರಕ್ಷಿಸಲು ಕಾಯ್ದೆ ರೂಪಿಸಿ ಅದಕ್ಕೆ ಎರಡೂ ಸದನದಲ್ಲಿ ಅನುಮೋದನೆ ಪಡೆದಿದೆ. ಆದರೆ ಅದಕ್ಕೆ ಇನ್ನೂ ರಾಜ್ಯಪಾಲರು ಸಹಿ ಹಾಕಿಲ್ಲ. ಆ ವಿಚಾರದ ಬಗ್ಗೆ ಸರ್ಕಾರ ನ್ಯಾಯಾಲಯಕ್ಕೆ ಯಾವುದೇ ಮಾಹಿತಿ ನೀಡಲಿಲ್ಲ.
ಕಳೆದ ಒಂದೂವರೆ ವರ್ಷದಿಂದ ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ಗುರುತಿಸಿ, ಅವುಗಳ ತೆರವಿಗೆ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕೆಂದು ನ್ಯಾಯಾಲಯ ಸರ್ಕಾರಕ್ಕೆ ಹಲವು ಬಾರಿ ನಿರ್ದೇಶನ ನೀಡಿದೆ. ಆದರೆ ಕೋವಿಡ್ ಮತ್ತಿತರ ಕಾರಣಗಳನ್ನು ನೀಡಿ ಸರ್ಕಾರ ಸಮಯಾವಕಾಶ ಪಡೆಯುತ್ತಲೇ ಇದೆ.