ಬೆಂಗಳೂರು: ಪಿಒಪಿ ಗಣಪನಿಂದ ಆಗುವ ಪರಿಸರ ಹಾನಿ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಿ.ಪ್ಯಾಕ್ (ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ) ವತಿಯಿಂದ ಬೆಂಗಳೂರಿನ ಜನತೆಗೆ ವಿಭಿನ್ನ ಕಾರ್ಯಾಗಾರ ಆಯೋಜಿಸಲಾಗಿತ್ತು.
ಈ ಕುರಿತಂತೆ ಬಿ.ಪ್ಯಾಕ್ ಕಾರ್ಯಕರ್ತೆ ವಂದನಾ ಶಾಸ್ತ್ರಿ ಮಾತಾನಾಡಿ, ಗಣೇಶನ ಹಬ್ಬ ಬರುತ್ತಿರುವ ವೇಳೆ ಪಿಒಪಿ ಗಣೇಶ ವಿಗ್ರಹಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಅದರ ವಿನ್ಯಾಸ, ಬಣ್ಣ ನೋಡಿ ಜನರು ಮಾರು ಹೋಗುತ್ತಾರೆ. ಆದರೆ ಪರಿಸರಕ್ಕೆ, ಬೆಂಗಳೂರಿನ ಕೆರೆಗಳಿಗೆ, ಜಲ ಚರಗಳಿಗೆ ಹಾಗೂ ಮನುಷ್ಯನ ಆರೋಗ್ಯದ ಮೇಲೆ ಆಗುತ್ತಿರುವ ಹಾನಿಯ ಕುರಿತು ಎಲ್ಲರೂ ಯೋಚಿಸಬೇಕಿದೆ. ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಮದ ಮನೆ ಮನೆಯಲ್ಲಿ ಮಣ್ಣಿನ ಗಣಪ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇನ್ನು ಬೆಂಗಳೂರು ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈಗಾಗಲೇ ನಗರದ 20 ಕ್ಕೂ ಹೆಚ್ಚು ವಾರ್ಡ್ಗಳಲ್ಲಿ ಮನೆ ಮನೆಯಲ್ಲಿ ಮಣ್ಣಿನ ಗಣಪ ಕಾರ್ಯಾಗಾರವನ್ನು ಆಯೋಜಿಸಲಿದ್ದೇವೆ ಎಂದು ಬಿ.ಪ್ಯಾಕ್ ಸಂಸ್ಥೆಯ ಕಾರ್ಯ ನಿರ್ವಹಕರಾದ ಹೆಚ್.ಎಸ್ ರಾಘವೇಂದ್ರ ತಿಳಿಸಿದರು.
ಈ ವೇಳೆ ಗಿರಿ ನಗರದ ವಿಜಯ ವಿದ್ಯಾಭಾರತಿ ಶಾಲೆಯ ಮಕ್ಕಳು ಮಣ್ಣಿನ ಗಣಪನನ್ನು ತಯಾರಿಸಿ ಪ್ರದರ್ಶಿಸಿದರು.