ಬೆಂಗಳೂರು : ದೇಸಿ ಪರಂಪರೆಯ ಆಯುರ್ವೇದ ವೈದ್ಯ ಪದ್ದತಿಗೆ ಮನ್ನಣೆ ದೊರಕಿಸಿಕೊಡುವ ಸಲುವಾಗಿ ನೀತಿಯೊಂದನ್ನು ರೂಪಿಸುವ ಕುರಿತು ಒಂದು ತಿಂಗಳಿನಲ್ಲಿ ಅಗತ್ಯ ಕ್ರಮಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದ್ದರಿಂದ ಕಾಂಗ್ರೆಸ್ ಸದಸ್ಯ ಯು.ಬಿ ವೆಂಕಟೇಶ್ ಖಾಸಗಿ ಬಿಲ್ ವಾಪಸ್ ಪಡೆದುಕೊಂಡರು. ವಿಧಾನ ಪರಿಷತ್ ಖಾಸಗಿ ಸದಸ್ಯರ ಕಾರ್ಯಕಲಾಪದಲ್ಲಿ ಖಾಸಗಿ ನಿರ್ಣಯವನ್ನು ಕಾಂಗ್ರೆಸ್ ಸದಸ್ಯ ಯು.ಬಿ ವೆಂಕಟೇಶ್ ಮಂಡಿಸಿದರು.
ನಿರ್ಣಯ ಕುರಿತು ಉತ್ತರ ನೀಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಕೇಂದ್ರ ಸರ್ಕಾರ ವಿಶೇಷ ಆಯುಷ್ ಮಂತ್ರಾಲಯ ಮಾಡಿದ್ದಾರೆ. ರಾಜ್ಯದಲ್ಲಿ ಹೊಸ ಆಯುಷ್ ಆಸ್ಪತ್ರೆ ನಿರ್ಮಾಣಕ್ಕೆ ಕಾರ್ಯಕ್ರಮ ರೂಪಿಸಿದ್ದೇವೆ, ಇರುವಂತಹ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠದಿಂದ ವೈದ್ಯರು,ಅರೆವೈದ್ಯರು, ಸಿಬ್ಬಂದಿಗೆ ತರಬೇತಿ ನೀಡುತ್ತಿದ್ದೇವೆ ಎಂದರು.
ಸಂಶೋಧನೆಗೆ ಒತ್ತು ನೀಡಲು, ಪಶುವೈದ್ಯಕೀಯದಲ್ಲೂ ಆಯುಷ್ ಔಷಧಿ ಬಳಸಲು ಬಜೆಟ್ನಲ್ಲಿ ಘೋಷಿಸಿದ್ದೇವೆ. 108 ಸೇವೆಗಳಲ್ಲಿ ಹೋಂ ಕ್ವಾರಂಟೈನ್ನಲ್ಲಿ ಕೋವಿಡ್ ಸಂದರ್ಭದಲ್ಲೂ ಆಯುಷ್ ಇಲಾಖೆಯ ಎಲ್ಲಾ ಅಧಿಕಾರಿ, ಸಿಬ್ಬಂದಿ, ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದೇವೆ. ಇದು ರಾಷ್ಟ್ರೀಯ ನೀತಿಯಾಗಿರುವುದರಿಂದ ಸ್ಪಷ್ಟ ನೀತಿ ನಿಯಮ ರೂಪಿಸಿದ್ದಾರೆ. ನಾವು ರಾಜ್ಯದಿಂದ ರೂಪಿಸಲು ಬರೋದಿಲ್ಲ, ಅವರೇನಾದರೂ ಸಲಹೆ ನೀಡಿದರೆ ಅದನ್ನ ಸ್ವೀಕರಿಸುತ್ತೇವೆ ಎಂದರು.
ಆಯುರ್ವೇದಕ್ಕೆ ಮಾನ್ಯತೆ ನೀಡಿ : ಸರ್ಕಾರದ ಉತ್ತರಕ್ಕೆ ಕೆಲವೊಂದು ಸ್ಪಷ್ಟೀಕರಣ ಬಯಸಿ ಮಾತನಾಡಿದ ಯು.ಬಿ.ವೆಂಕಟೇಶ್, ನಾನು ಆಯುರ್ವೇದಕ್ಕೆ ಮಾನ್ಯತೆ ಕೊಡಿ ಎಂದು ಕೇಳುತ್ತಿದ್ದೇನೆ. ರಾಜ್ಯದಲ್ಲಿ 57 ಆಯುರ್ವೇದ ಕಾಲೇಜುಗಳಿವೆ. ವರ್ಷ ವರ್ಷ ಸಾವಿರಾರು ವಿದ್ಯಾರ್ಥಿಗಳು ಹೊರ ಬರುತ್ತಾರೆ. ಅವರಿಗೆ ಒಂದು ಡೆತ್ ಸರ್ಟಿಫಿಕೇಟ್ ಕೊಡಲು ಅಧಿಕಾರವಿಲ್ಲ ಎಂದರೆ ಹೇಗೆ? ಅವರಿಗೆ ಸ್ಟೈಫೆಂಡ್ ಏನಾದರೂ ಕೊಡುತ್ತೀರಾ ಎಂದು ಪ್ರಶ್ನಿಸಿದರು.
ಶಿಕ್ಷಣ ಸಂಸ್ಥೆಗಳನ್ನು ಮುಚ್ಚಿಸಬೇಕಾಗುತ್ತದೆ : ಇದಕ್ಕೆ ಸರ್ಕಾರದ ಪರ ಉತ್ತರಿಸಿದ ಕಾನೂನು ಸಚಿವ ಮಾಧುಸ್ವಾಮಿ, ಓದೋರಿಗೆಲ್ಲ ಉದ್ಯೋಗ ಕೊಡಿ ಎಂದು ಕೇಳಿದರೆ ಹೇಗಾಗುತ್ತದೆ. ಎಲ್ಲರಿಗೂ ಉದ್ಯೋಗ ಕೊಡೊಕಾಗುತ್ತದೆಯಾ?. ಹಾಗಾದರೆ, ಶಿಕ್ಷಣ ಸಂಸ್ಥೆಯನ್ನ ಮುಚ್ಚಿಸಬೇಕಾಗುತ್ತದೆ ಅಷ್ಟೇ ಎಂದರು.
ಒಂದು ತಿಂಗಳಿನಲ್ಲಿ ಸೂಕ್ತ ನಿರ್ಣಯ : ಸದಸ್ಯರ ಪ್ರಶ್ನೆಗೆ ಸ್ಪಷ್ಟೀಕರಣ ನೀಡಿದ ಆರೋಗ್ಯ ಸಚಿವ ಸುಧಾಕರ್, ರಿಜಿಸ್ಟರ್ ಆಯುರ್ವೇದ ವೈದ್ಯರಿಗೆ ಮರಣ ಪ್ರಮಾಣ ಪತ್ರ ಕೊಡಲು ಅವಕಾಶ ಇದೆ. ಆದರೆ, ನಾಟಿ ಪದ್ದತಿ ಅನುಸರಿಸುವವರಿಗೆ ಅವಕಾಶ ಕೊಡೊದಕ್ಕೆ ಆಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ಮಾಡಿದೆ. ಕೇರಳದಿಂದ ಸುಪ್ರೀಂಕೋರ್ಟ್ಗೆ ಹೋಗಿದ್ದರು, ಅಲ್ಲಿ ತೀರ್ಮಾನ ಬಂದಿದೆ. ಹಾಗಾಗಿ, ನಾವು ಅವಕಾಶ ನೀಡಲು ಸಾಧ್ಯವಿಲ್ಲ. ಆಯುರ್ವೇದ, ಆಯಷ್ ಬಗ್ಗೆ ಇರುವ ಅಭಿಪ್ರಾಯಕ್ಕೆ ಅಭಿನಂದನೆ ಸಲ್ಲಿಸುತ್ತೇನೆ, ಖಾಸಗಿ ನಿರ್ಣಯದಲ್ಲಿನ ಬೇಡಿಕೆಗಳಲ್ಲಿನ ಅಂಶಗಳಿಗೆ ಸರ್ಕಾರದ ಸಹಮತವಿದೆ ಎಂದರು.
ಹಾಗಾಗಿ, ಆಯುರ್ವೇದ, ಆಯುಷ್ ಇಲಾಖೆಗೆ ಕೊಡಬೇಕಾದ ಪ್ರಾಮುಖ್ಯತೆ ನೀಡಲು ಈ ಸರ್ಕಾರ ಬದ್ದವಿದೆ, ಇನ್ನು ಒಂದೇ ತಿಂಗಳಿನಲ್ಲಿ ಖಾಸಗಿ ನಿರ್ಣಯವನ್ನು ಯಾವ ರೀತಿ ಅನುಷ್ಠಾನಕ್ಕೆ ತರಬೇಕು ಎಂದು ನಿರ್ಧರಿಸಿ ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಭರವಸೆ ನೀಡಿದರು. ಸರ್ಕಾರದ ಉತ್ತರಕ್ಕೆ ಸದಸ್ಯ ಯು.ಬಿ ವೆಂಕಟೇಶ್ ತೃಪ್ತಿ ವ್ಯಕ್ತಪಡಿಸಿದರು. ಸರ್ಕಾರದ ಉತ್ತರವನ್ನು ನಂಬಿ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸುತ್ತಾ ನಿರ್ಣಯಕ್ಕೆ ಸರ್ಕಾರ ಒಪ್ಪಿಗೆ ನೀಡಿದಲ್ಲಿ ಖಾಸಗಿ ಬಿಲ್ ವಾಪಸ್ ಪಡೆಯಬೇಕು ಎನ್ನುವ ನಿಯಮದಂತೆ ಖಾಸಗಿ ನಿರ್ಣಯವನ್ನು ವಾಪಸ್ ಪಡೆದುಕೊಂಡರು.
ಇದನ್ನೂ ಓದಿ: 'ಮನೆ ಮನೆಗೆ ಗಂಗೆ 'ಎಂಬ ಕಾರ್ಯಕ್ರಮದಡಿ 97.91 ಲಕ್ಷ ನಲ್ಲಿ ಸಂಪರ್ಕ : ಸಚಿವ ಕೆ.ಎಸ್. ಈಶ್ವರಪ್ಪ