ಬೆಂಗಳೂರು: ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ತೆರಿಗೆ ವಂಚಿಸಿದ್ದಾರೆ ಎಂದು ಈಗಾಗಲೇ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದ ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣರೆಡ್ಡಿ, ಇದೀಗ ಮತ್ತೆ 20 ಪುಟಗಳ ದಾಖಲೆಗಳನ್ನು ಇಡಿ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ದಾಖಲೆ ಸಲ್ಲಿಸಿ ಮಾತನಾಡಿದ ರವಿಕೃಷ್ಣಾರೆಡ್ಡಿ, 10 ರಿಂದ 15 ವರ್ಷಗಳ ಕಾಲ ಕೆ.ಜೆ.ಜಾರ್ಜ್ ಅವರ ವ್ಯವಹಾರಗಳ ದಾಖಲೆ ಕಲೆ ಹಾಕಲಾಗಿದೆ. ತೆರಿಗೆ ಕಳ್ಳತನ ಮಾಡಿರುವುದು ದಾಖಲೆಯಲ್ಲಿ ಮಾಹಿತಿಯಿದೆ. ಸಲ್ಲಿಕೆ ಮಾಡಿರುವ ದಾಖಲೆಗಳ ಆಧಾರದ ಮೇಲೆ ಇಡಿ ತನಿಖೆ ಮಾಡಬೇಕಿದೆ. ನಾವು ಕೊಟ್ಟ ದಾಖಲೆಗಳಲ್ಲಿ ಸತ್ಯಾಂಶವಿದೆ ಎಂದರು.
ಇನ್ನು, ಜಾರ್ಜ್ ಅವರು ನನ್ನ ವಿರುದ್ದ ಮಾನನಷ್ಟ ಹೂಡಿದ್ದ ಬಗ್ಗೆ ನನಗೆ ನೋಟಿಸ್ ಬಂದಿಲ್ಲ. ಈ ರೀತಿಯ ಕಾಂಜಿ - ಪೀಂಜಿ ಕೇಸ್ಗೆ ರವಿಕೃಷ್ಣಾರೆಡ್ಡಿ ಹೆದರುವುದಿಲ್ಲ. ಇಡಿ ಇಲಾಖೆಗೆ ಬಂದು 20 ಪುಟಗಳ ಇತರ ದಾಖಲೆಗಳನ್ನು ನೀಡಿದ್ದೇನೆ. ಸುಮಾರು ನೂರಾರು ಕೋಟಿ ವ್ಯವಹಾರ ನಡೆಸಿದ್ದಾರೆ. ಕೆಲವು ಬ್ಯಾಂಕ್ಗಳಲ್ಲಿ ಜಾರ್ಜ್ ಸಾಲವನ್ನು ಪಡೆದಿದ್ದಾರೆ. ಆ ಸಾಲವನ್ನು ತೀರಿಸಲು ಬೇರೆ ಬೇರೆ ಅಕೌಂಟ್ಗಳಿಂದ ಹಣ ವರ್ಗಾವಣೆಯಾಗಿದೆ. ಅದರ ಮಾಹಿತಿಯನ್ನೂ ಇಡಿಗೆ ನೀಡಿದ್ದೇವೆ.
ಸಿಂಗಾಪುರ, ಮಾರಿಷಸ್ನಲ್ಲಿ ಕಂಪನಿಗೆ ಹಣ ಹೂಡಿಕೆಯಾಗಿದೆ. ಅದನ್ನು ವೈಟ್ ಮನಿಯಾಗಿ ಬದಲಾವಣೆ ಮಾಡಲಾಗಿದೆ. ಈ ಸಂಬಂಧ ತನಿಖೆ ನಡೆಸುವಂತೆ ಇಡಿ ಅಧಿಕಾರಿಗಳಿಗೆ ದಾಖಲೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.