ಬೆಂಗಳೂರು: ಐದು ವರ್ಷಗಳ ಕಾಲ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಯುವತಿಯೊಬ್ಬಳು ಅತ್ಯಾಚಾರ ಆರೋಪ ಮಾಡಿ ದಾಖಲಿಸಿರುವ ಪ್ರಕರಣದಲ್ಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗುವ ಭೀತಿಯಲ್ಲಿದ್ದ ಆರೋಪಿ ಯುವಕನಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.
ನಗರದ ಬೊಮ್ಮನಹಳ್ಳಿಯ ನಿವಾಸಿ ಕಮಲೇಶ್ ಚೌಧರಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಪೀಠ ಷರತ್ತು ಬದ್ಧವಾಗಿ ಪುರಸ್ಕರಿಸಿದೆ. ಆರೋಪಿ, 1 ಲಕ್ಷ ರೂ. ಮೊತ್ತದ ಬಾಂಡ್, ಅಷ್ಟೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳು ಶ್ಯೂರಿಟಿ, ಸಾಕ್ಷ್ಯ ನಾಶಪಡಿಸಬಾರದು. ತನಿಖಾಧಿಕಾರಿ ಸೂಚಿಸಿದಾಗ ಹಾಜರಾಗಬೇಕು. ದೋಷಾರೋಪ ಪಟ್ಟಿ ಸಲ್ಲಿಸುವವರೆಗೆ ತನಿಖಾಧಿಕಾರಿಯ ಅನುಮತಿ ಇಲ್ಲದೇ ನಗರ ಬಿಟ್ಟು ಹೋಗಬಾರದು. ತಿಂಗಳಿಗೊಮ್ಮೆ ಠಾಣೆಗೆ ತೆರಳಿ ಸಹಿ ಹಾಕಬೇಕು ಎಂಬ ಷರತ್ತುಗಳನ್ನು ವಿಧಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಹಿನ್ನೆಲೆ : ಮಾರತ್ಹಳ್ಳಿ ಪೊಲೀಸ್ ಠಾಣೆಗೆ ಸಂತ್ರಸ್ತ ಯುವತಿ ದೂರು ನೀಡಿ, ತಾನು ಕೆಲಸ ಮಾಡುತ್ತಿರುವ ಸಂಸ್ಥೆಯ ಸಹೋದ್ಯೋಗಿ ಜತೆ ಐದು ವರ್ಷ ವಾಸವಿದ್ದು, ಭಿನ್ನಾಭಿಪ್ರಾಯಗಳಿಂದ ದೂರವಾಗಿದ್ದೇನೆ. ಹಾಗಿದ್ದೂ, ಯುವಕ ಮಧ್ಯರಾತ್ರಿ ವೇಳೆ ಮನೆಗೆ ಬಂದು ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದಾನೆ. ಅಲ್ಲದೇ, ಆತ ಸೂಚಿಸಿದ ಜಾಗಕ್ಕೆ ಬಂದು ಸಹಕರಿಸುವಂತೆ ಒತ್ತಾಯಿಸುತ್ತಿದ್ದಾನೆ. ಮದುವೆಯಾದ ನಂತರವೂ ಇದೇ ರೀತಿ ಕಿರುಕುಳ ನೀಡುತ್ತಿದ್ದು, ತನ್ನೊಂದಿಗೆ ಸಹಕರಿಸದಿದ್ದರೆ ಗಂಡನಿಗೆ ತಿಳಿಸುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾನೆ ಎಂದು ತಿಳಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಮಲೇಶ್ ವಿರುದ್ಧ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ.. ವೇಗದೂತ ಕೊರೊನಾ ರೂಪಾಂತರದ ಅವಾಂತರ: ಜಸ್ಟ್ 13 ನಿಮಿಷದಲ್ಲಿ ಕೋವಿಡ್ ರಿಸಲ್ಟ್ ಔಟ್!
ಈ ಹಿನ್ನೆಲೆ ಬಂಧನದ ಭೀತಿಗೆ ಒಳಗಾಗಿರುವ ಆರೋಪಿ ನಿರೀಕ್ಷಣಾ ಜಾಮೀನು ಕೋರಿದ್ದ. ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್, ಸಂತ್ರಸ್ತೆ 5 ವರ್ಷ ಅರ್ಜಿದಾರನೊಂದಿಗೆ ಲಿವ್ ಇನ್ ರಿಲೇಷನ್ಶಿಪ್ನಲ್ಲಿ ಇದ್ದಳು. ದೂರವಾದ ನಂತರವೂ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಪರ್ಕ ಬೆಳೆಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಘಟನೆ ನಡೆದ ನಿರ್ದಿಷ್ಟ ದಿನಾಂಕ ನಮೂದಿಸಿಲ್ಲ. ಅತ್ಯಾಚಾರ ನಡೆದಿರುವುದಕ್ಕೆ ವೈದ್ಯಕೀಯ ಸಾಕ್ಷ್ಯಗಳನ್ನು ಒದಗಿಸಿಲ್ಲ. ಇವೆಲ್ಲವನ್ನು ಗಮನಿಸಿದರೆ, ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದು ಎಂದು ಅಭಿಪ್ರಾಯಪಟ್ಟಿದೆ.