ಬೆಂಗಳೂರು: ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಟಿಕೆಟ್ಗಾಗಿ ಪಟ್ಟು ಹಿಡಿದಿದ್ದ ಅನರ್ಹ ಶಾಸಕ ಆರ್.ಶಂಕರ್ ಬೆಂಬಲಿಗರ ಮನವೊಲಿಸುವಲ್ಲಿ ಕಡೆಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಫಲರಾಗಿದ್ದಾರೆ.
ಕಳೆದೊಂದು ದಿನದಿಂದ ನಡೆದ ನಿರಂತರ ಸರಣಿ ಸಭೆಗಳ ನಂತರ ಪಟ್ಟು ಸಡಿಸಿಲಿದ ಶಂಕರ್ ಸಚಿವ ಸ್ಥಾನದ ಭರವಸೆಗೆ ಒಪ್ಪಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಹಗ್ಗ ಜಗ್ಗಾಟ ಕಡೆಗೂ ತಾರ್ಕಿಕ ಅಂತ್ಯಕ್ಕೆ ಬಂದಿದೆ.
ಬೆಳಗ್ಗೆಯೇ ಅನರ್ಹ ಶಾಸಕ ಆರ್.ಶಂಕರ್ರನ್ನು ನಿವಾಸಕ್ಕೆ ಕರೆಸಿಕೊಂಡ ಸಿಎಂ ಬಿಎಸ್ವೈ ಮತ್ತೊಮ್ಮೆ ಮಾತುಕತೆ ನಡೆಸಿ ಮೊನವೊಲಿಕೆ ಮಾಡಿದರು. ಕೊಟ್ಟ ಮಾತನ್ನು ತಪ್ಪಲ್ಲ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಿ ಮಂತ್ರಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು. ಯಡಿಯೂರಪ್ಪ ಅವರ ಸತತ ಮನವಿಗೆ ಕಡೆಗೂ ಸ್ಪಂದಿಸಿದ ಶಂಕರ್ ಟಿಕೆಟ್ ಬಿಟ್ಟುಕೊಡಲು ಸಮ್ಮತಿಸಿದರು.
ಆದರೆ ಆರ್ ಶಂಕರ್ ಯೂಟರ್ನ್ ಹೊಡೆದ ವಿಚಾರದಿಂದ ಶಂಕರ್ ವಿರುದ್ಧವೇ ಬೆಂಬಲಿಗರು ತಿರುಗಿ ಬಿದ್ದರು. ಸಿಎಂ ನಿವಾಸದ ಒಳಗೆ ಹೋಗುವಾಗ ಒಂದು ಮಾತಾಡಿ, ಇವಾಗ ಹೊರಗೆ ಬಂದು ಇನ್ನೊಂದು ಮಾತನಾಡ್ತಿದ್ದಿರಲ್ಲ ಎಂದು ಗರಂ ಆದರು. ಘೇರಾವ್ ಹಾಕಿ ನಿಮಗೆ ಅನ್ಯಾಯ ಆಗಿದೆ ಅಂತಾ ನಾವು ಅಷ್ಟು ಪ್ರತಿಭಟನೆ ಮಾಡಿದ್ರೆ ನೀವು ಹೋಗಿ ಯಡಿಯೂರಪ್ಪ ಜೊತೆ ರಾಜಿಯಾಗಿ ಬಂದಿದ್ದೀರಾ ಇವಾಗ ತಮ್ಮ ಮಾತನ್ನು ಬದಲಾಯಿಸುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಕಣ್ಣೀರು ಸುರಿಸುತ್ತಾ ಕ್ಷೇತ್ರದ ಕಡೆ ನೀವು ಬರಲೇಬೇಡಿ ಎಂದು ಅಸಮಾಧಾನದ ನುಡಿಗಳನ್ನಾಡಿದರು.