ಬೆಂಗಳೂರು: ಹೈಕಮಾಂಡ್ ಭೇಟಿಗಾಗಿ ನವದೆಹಲಿಗೆ ತೆರಳಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಪಸ್ಸಾಗಿದ್ದು, ಅವರ ಮುಂದಿನ ನಡೆ ಏನು..? ಯಾರನ್ನು ಭೇಟಿಯಾಗಿದ್ದಾರೆ? ಏನು ಚರ್ಚಿಸಿದ್ದಾರೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.
ಸದ್ಯಕ್ಕೆ ಮಾಧ್ಯಮಗಳಿಂದ ದೂರ ಉಳಿದಿರುವ ಜಾರಕಿಹೊಳಿ ಇಂದು ಗೋಕಾಕ್ನಲ್ಲಿ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಲ್ಲಿಂದ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿರುವ ಜಾರಕಿಹೊಳಿ ಆಪ್ತರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಜಾರಕಿಹೊಳಿ ಅವರ ಮೂಲಕವೇ ಹೈಕಮಾಂಡ್ ನಾಯಕರ ಭೇಟಿಗೆ ಯತ್ನಿಸಿದ್ದರು. ಜೆ.ಪಿ.ನಡ್ಡಾ, ಅರುಣ್ ಸಿಂಗ್ ಸೇರಿದಂತೆ ಇತರ ಮುಖಂಡರನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಯಾರನ್ನೆಲ್ಲಾ ಭೇಟಿ ಮಾಡಿದ್ದಾರೆ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.
ಇದನ್ನೂ ಓದಿ: ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ ಬೆಂಗಳೂರು ಪೊಲೀಸರು
ಸಿಡಿ ಪ್ರಕರಣದ ತನಿಖೆ ವಿಳಂಬ ಮಾಡಲಾಗುತ್ತಿದೆ. ಬಿಜೆಪಿಯ ಮೂವರು ನಾಯಕರು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಜೊತೆ ಸೇರಿಕೊಂಡು ತಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಷಡ್ಯಂತ್ರ ನಡೆಸಿದ್ದಾರೆ ಎನ್ನುವ ಆರೋಪ ಮಾಡಿರುವ ಜಾರಕಿಹೊಳಿ ಈ ಸಂಬಂಧ ಹೈಕಮಾಂಡ್ಗೆ ದೂರು ಸಲ್ಲಿಕೆ ಮಾಡಲು ದೆಹಲಿಗೆ ಹೋಗಿದ್ದರು ಎನ್ನಲಾಗಿದೆ.
ಸದ್ಯ ಬೆಂಗಳೂರಿಗೆ ವಾಪಸ್ಸಾಗಿರುವ ಜಾರಕಿಹೊಳಿ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡಿಲ್ಲ. ಇಂದು ಗೋಕಾಕ್ನಲ್ಲಿ ಕಾರ್ಯಕ್ರಮವಿದ್ದು ಅಲ್ಲಿಗೆ ತೆರಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಂತರ ಗೋಕಾಕ್ನಲ್ಲಿ ಸುದ್ದಿಗೋಷ್ಠಿ ನಡೆಸಿ ದೆಹಲಿ ಪ್ರವಾಸ ಮತ್ತು ಮುಂದಿನ ನಡೆ ಬಗ್ಗೆ ಮಾಹಿತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.