ಬೆಂಗಳೂರು : ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಎಂ ಎಸ್ ರಕ್ಷಾ ರಾಮಯ್ಯ ಹಾಗೂ ಯುವ ಕಾಂಗ್ರೆಸ್ ಸಮಿತಿಯ ಚುನಾಯಿತ ಪ್ರತಿನಿಧಿಗಳ ಪದಗ್ರಹಣ ಸಮಾರಂಭ ನಗರದಲ್ಲಿ ನಡೆಯಿತು. ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಪದಗ್ರಹಣ ಸಮಾರಂಭ ಆಯೋಜಿಸಲಾಗಿತ್ತು.
ಈ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್ ಧ್ರುವನಾರಾಯಣ, ಸಲೀಂ ಅಹ್ಮದ್, ಮಾಜಿ ಸಚಿವ ಸೀತಾರಾಮ್, ಎಐಸಿಸಿ ಪದಾಧಿಕಾರಿಗಳು, ಶಾಸಕರು, ಪಕ್ಷದ ಹಿರಿಯ ಮುಖಂಡರು ಭಾಗಿಯಾಗಿದ್ದರು. ಯುವ ಕಾಂಗ್ರೆಸ್ ಮುಖಂಡ ಮೊಹ್ಮದ್ ನಲಪಾಡ್ ಗೈರು ಎದ್ದು ಕಂಡಿತು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧು ಯಾಕ್ಷಿ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಸೇರಿದಂತೆ 5 ಸಾವಿರ ಕಾಂಗ್ರೆಸ್ ನಾಯಕರ ಟ್ವಿಟರ್ ಖಾತೆ ಬ್ಲಾಕ್ ಮಾಡಲಾಗಿದೆ. ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ನಾಯಕರು ಹೋರಾಟ ಮಾಡಬೇಕು.
ಅನೈತಿಕ ಸರ್ಕಾರವನ್ನು ಕಿತ್ತು ಹಾಕುವಂತೆ ಜನರಲ್ಲಿ ಮನವಿ ಮಾಡಬೇಕು. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ತರುವ ಜವಾಬ್ದಾರಿ ಯುವ ಕಾಂಗ್ರೆಸ್ ಮುಖಂಡರ ಮೇಲೆ ಇದೆ. ಇದಕ್ಕಾಗಿ ನಿಮ್ಮನ್ನು ತೊಡಗಿಸಿಕೊಳ್ಳುವ ಅನಿವಾರ್ಯತೆ ಇದೆ.
ನಮ್ಮ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಪರೋಕ್ಷವಾಗಿ ಕೈಜೋಡಿಸಿದೆ. ಇದನ್ನ ತಾವು ಮನೆಮನೆಗೆ ತೆರಳಿ ಜನರಿಗೆ ತಿಳಿಸುವ ಕಾರ್ಯ ಮಾಡಬೇಕು. ಆಗ ಮಾತ್ರ ಜನರಿಗೆ ಸತ್ಯದ ಅರಿವಾಗುತ್ತದೆ.
ಈಗ ಕೇಂದ್ರದಲ್ಲಿ ಮೋದಿ ಸರ್ಕಾರ ರಾಜ್ಯದ ಜನತೆಗೆ ಅನ್ಯಾಯ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅನೈತಿಕವಾಗಿ ಅಧಿಕಾರಕ್ಕೆ ಬಂದಿದೆ. ಇದನ್ನು ಜನರಿಗೆ ತಿಳಿಸಿ ಮುಂದೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಯುವಕರು ಶ್ರಮಿಸಬೇಕು ಎಂದು ಕರೆ ಕೊಟ್ಟರು.
![RAKSHA_RAMAIAH_](https://etvbharatimages.akamaized.net/etvbharat/prod-images/kn-bng-01-raksha-ramaiah-padagrahana-script-7208077_13082021132005_1308f_1628841005_946.jpg)
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ ಮಾತನಾಡಿ, ನಾಯಕತ್ವದ ಪ್ರದರ್ಶನಕ್ಕೆ ಇದೊಂದು ಉತ್ತಮ ಅವಕಾಶವಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಿ. ಯುವ ಕಾಂಗ್ರೆಸ್‌ಗೆ ಹೆಚ್ಚಿನ ಮಹಿಳೆಯರನ್ನು ಸೇರ್ಪಡೆ ಮಾಡಿಕೊಂಡು ಒಟ್ಟಾಗಿ ಶ್ರಮಿಸುವ ಜವಾಬ್ದಾರಿ ನಮ್ಮ ಮೇಲಿದೆ. ಪಕ್ಷ ಸಂಘಟನೆಗೆ ರಕ್ಷಾರಾಮಯ್ಯ ಉತ್ತಮ ಕೊಡುಗೆ ನೀಡಲಿ ಎಂದು ಹಾರೈಸುತ್ತೇನೆ ಎಂದರು.
![RAKSHA_RAMAIAH_](https://etvbharatimages.akamaized.net/etvbharat/prod-images/kn-bng-01-raksha-ramaiah-padagrahana-script-7208077_13082021130207_1308f_1628839927_836.jpg)
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ದೇಶದ ಅಭಿವೃದ್ಧಿ ಆಗಬೇಕಾದರೆ ಅದು ಯುವಕರಿಂದ ಮಾತ್ರ ಸಾಧ್ಯ. ಯುವ ಸಮುದಾಯವನ್ನು ಕಟ್ಟುವಲ್ಲಿ ಯುವ ಕಾಂಗ್ರೆಸ್‌ಗೆ ಅತ್ಯಂತ ದೊಡ್ಡ ಇತಿಹಾಸವಿದೆ.
ಯುವಕರನ್ನು ಸಬಲೀಕರಣಗೊಳಿಸಲು ರಕ್ಷಾರಾಮಯ್ಯಗೆ ಇದೊಂದು ಉತ್ತಮ ಅವಕಾಶ ಲಭಿಸಿದೆ. ತಮ್ಮ ಮೇಲಿರುವ ದೊಡ್ಡ ಜವಾಬ್ದಾರಿ ಹಾಗೂ ಎದೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಿ ಎಂದು ಸಲಹೆ ನೀಡುತ್ತೇನೆ.
ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷದಿಂದಲೂ ಕೇವಲ ಸುಳ್ಳನ್ನು ಹೇಳಿಕೊಂಡು ಬಂದಿದೆ. ನಾನು ನರೇಂದ್ರ ಮೋದಿ ಮಾತನಾಡುತ್ತಿದ್ದೇನೆ ಎಂಬ ಶಬ್ಧ ಬಿಟ್ಟರೆ ಉಳಿದೆಲ್ಲವೂ ಸುಳ್ಳನ್ನೇ ಆಡಿದ್ದಾರೆ. 14 ಕೋಟಿ ಯುವಕರಿಗೆ ಉದ್ಯೋಗ ನೀಡಬೇಕಿದ್ದ ಬಿಜೆಪಿ ಸರ್ಕಾರ ಜನರಿಗೆ ಭ್ರಮನಿರಸನ ಉಂಟು ಮಾಡಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮತ್ತು ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿವೆ. ನಮ್ಮ ಯುವ ನಾಯಕರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ದುರಾಡಳಿತವನ್ನು ಜನರಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದು ಯುವ ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾರಾಮಯ್ಯ ಮಾತನಾಡಿ, ಯುವ ಕಾಂಗ್ರೆಸ್ ಪಕ್ಷದ ಶಕ್ತಿಯಲ್ಲ. ದೇಶದ ಶಕ್ತಿಯಾಗಿದೆ. ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ನಮ್ಮ ಹಿಂದಿನ ಯುವ ನಾಯಕರ ಹೋರಾಟ ಇರಲಿದೆ. ನಮ್ಮ ಸಮಿತಿ ರಚನೆಯಾಗಿ ಆರು ತಿಂಗಳಾಗಿದೆ. ನಮಗೆ ಇನ್ನೂ ಎರಡೂವರೆ ವರ್ಷ ಕಾಲಾವಧಿ ಇದೆ. ಎಲ್ಲರೂ ಸೇರಿ ಉತ್ತಮ ಕೆಲಸ ಮಾಡೋಣ.
ಪಕ್ಷದ ರಾಷ್ಟ್ರೀಯ ನಾಯಕರು ತೋರಿದ ಹಾದಿ ಆಧರಿಸಿ ಕಾರ್ಯ ನಿರ್ವಹಣೆ ಆರಂಭಿಸಿದ್ದೇವೆ. 16 ಲಕ್ಷಕ್ಕೂ ಅಧಿಕ ಮಂದಿಗೆ ಆಹಾರ, 8 ಸಾವಿರ ಆ್ಯಂಬುಲೆನ್ಸ್ ವ್ಯವಸ್ಥೆ, 2.5 ಲಕ್ಷ ರೇಷನ್ ಕಿಟ್, ಆರೋಗ್ಯ ಕಿಟ್ ವಿತರಣೆ ಮಾಡಲಾಗಿದೆ. ಲಕ್ಷಾಂತರ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ಪರಿಹಾರ ಕಾರ್ಯ ಮಾಡುವುದು ಮಾತ್ರ ನಮ್ಮ ಕೆಲಸವಲ್ಲ. ಪಕ್ಷ ಕಟ್ಟುವ ಹೊಣೆಯನ್ನೂ ನಿಭಾಯಿಸಿದ್ದೇವೆ ಎಂದರು.
ಕೋವಿಡ್ ನಿಯಂತ್ರಣವನ್ನು ರಾಜ್ಯ, ಕೇಂದ್ರ ಸರ್ಕಾರಗಳು ಮಾಡಬೇಕಾದ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಅದು ಕನ್ನಡ ರೈತ ವಿರೋಧಿ ಹಾಗೂ ಇತರೆ ಜನ ವಿರೋಧಿ ಕಾನೂನುಗಳ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡಿದೆ.
ಯುವ ಕಾಂಗ್ರೆಸ್‌ನ ಪಾತ್ರವೂ ಸಾಕಷ್ಟಿದೆ. ಬಿಜೆಪಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ತೇಜಸ್ವಿ ಸೂರ್ಯ ಅಭಿವೃದ್ಧಿ ವಿಚಾರವಾಗಿ ನಮ್ಮ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ವಿ ಶ್ರೀನಿವಾಸ ಬಳಿ ಕಲಿಯುವ ಪಾಠಗಳು ಸಾಕಷ್ಟಿದೆ.
ನಾವು ಕೇವಲ ಪರಿಹಾರ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾತ್ರ ಮಾಡಿಲ್ಲ, ಬಿಜೆಪಿಯವರ ಕೋಮುವಾದವನ್ನು ಸಹ ಬೆಳಕಿಗೆ ತರುವ ಕೆಲಸ ಮಾಡಿದ್ದೇವೆ. ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿ ಭ್ರಷ್ಟಾಚಾರ ಮಾಡಿದ ಸಚಿವೆಯನ್ನು ನೂತನ ಸರ್ಕಾರದಲ್ಲಿ ಮುಜರಾಯಿ ಸಚಿವರನ್ನಾಗಿ ಮಾಡಲಾಗಿದೆ ಎಂದರು.
ಈ ರಾಜ್ಯವನ್ನು ದೇವರೇ ಕಾಪಾಡಬೇಕು. ಕೇಂದ್ರದ ತನಿಖಾ ಸಂಸ್ಥೆಗಳನ್ನು ಖಾಸಗಿ ಹಿತಾಸಕ್ತಿಗೆ ಬಳಕೆ ಮಾಡಲಾಗುತ್ತಿದೆ. ದೇಶವನ್ನು ಪತನದತ್ತ ಕೊಂಡೊಯ್ಯುತ್ತಿರುವ ಬಿಜೆಪಿ ಸರ್ಕಾರ ಬದಲಿಸುವ ಕಾರ್ಯ ಆಗಬೇಕಿದೆ. ದೇಶದ ವಿರುದ್ಧ ಹೋರಾಡುವ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರಿಗೆ ಮಾಧ್ಯಮವಾಗಿರುವ ಟ್ವಿಟರ್ ಖಾತೆಯನ್ನು ಬಂದ್ ಮಾಡಲಾಗುತ್ತಿದೆ.
ಪ್ರಜಾಪ್ರಭುತ್ವವನ್ನು ಸಾಯಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಜನರು ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ. ಬೆಡ್, ಪೆಗಾಸಿಸ್ ಹಗರಣಗಳು ಬಿಜೆಪಿ ಸರ್ಕಾರಗಳ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿವೆ. ಜನರ ಪ್ರತೀಕಾರ ಎದುರಿಸಬೇಕಿದೆ. ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶವೇ ಇದಕ್ಕೆ ಸಾಕ್ಷಿಯಾಗಲಿದೆ ಎಂದರು.
ಯುವ ನಾಯಕರು ಮನೆ ಮನೆಗೆ ತೆರಳಿ ಜನ ಜಾಗೃತಿ ಮೂಡಿಸಿ. ನಮ್ಮ ಯುವ ಕಾಂಗ್ರೆಸ್ ನಾಯಕರನ್ನು ಪಕ್ಷದ ಸಂಘಟನೆಯಲ್ಲಿ ಬಳಸಿಕೊಳ್ಳಿ ಎಂದು ರಾಜ್ಯ ನಾಯಕರಿಗೆ ಮನವಿ ಮಾಡಿದರು.