ಬೆಂಗಳೂರು : ಚೀನಾದ ಸೈನ್ಯ ಲಡಾಖ್ ಬಳಿ ನಡೆಸಿದ ದಾಳಿ ವಿಚಾರವಾಗಿ ಕೇಂದ್ರ ಸರ್ಕಾರ ತಪ್ಪು ಮಾಹಿತಿ ನೀಡುತ್ತಿದೆ. ಅಲ್ಲಿ ನಡೆದಿದ್ದೇ ಬೇರೆ, ಪ್ರಧಾನಿ ಹೇಳುತ್ತಿರುವುದೇ ಬೇರೆ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಲಡಾಖ್ನಲ್ಲಿ ನಡೆದಿದ್ದನ್ನ ಒಪ್ಪುತ್ತಿಲ್ಲ. ಯಾಕೆ ಹೀಗೆ ಮಾಡಿದ್ದಾರೋ ಗೊತ್ತಾಗುತ್ತಿಲ್ಲ. ನಮ್ಮ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಈ ವಿಚಾರವಾಗಿ ಪ್ರಸ್ತಾಪಿಸಿದ್ದರು. ಆದರೆ, ನಮ್ಮ ಪಕ್ಷದ ಹಿರಿಯ ನಾಯಕ ಆಡಿದ ಮಾತಿಗೆ ಬೆಲೆ ಸಿಗುತ್ತಿಲ್ಲ ಎಂದರು.
ದೇಶದ ಮೇಲೆ ದಾಳಿ ಮಾಡಿದಾಗ ಸುಮ್ಮನಿರಲು ಸಾಧ್ಯವಿಲ್ಲ. ಹೀಗಾಗಿ ನಾವು ನಿಮಗೆ ಸಂಪೂರ್ಣ ಬೆಂಬಲ ನೀಡ್ತೇವೆ. ಆದರೆ, ನೀವು ಸತ್ಯವನ್ನ ಮರೆಮಾಡಬೇಡಿ. ಜನರ ಮುಂದೆ ಸತ್ಯವನ್ನ ತೆರೆದಿಡಿ. ಮೋದಿಯವರು ಹೇಳಿದ್ದೇ ಸರಿ ಅನ್ನೋ ಮನೋಭಾವದವರಿದ್ದಾರೆ. ಎಲ್ಲಾ ಮಾಧ್ಯಮಗಳಲ್ಲೂ ಇದರ ಬಗ್ಗೆ ಪ್ರಶ್ನೆ ಎದ್ದಿದೆ. ಇದರ ಬಗ್ಗೆ ಕೇಂದ್ರ ಈಗಲಾದ್ರೂ ಬಾಯಿ ತೆರೆಯಬೇಕು. ನಾವೆಲ್ಲ ಸೇರಿ ದೇಶವನ್ನ ಉಳಿಸಬೇಕಿದೆ ಎಂದರು.
ಜೂನ್ 15 ಮತ್ತು16ರಂದು ಚೀನಾದಿಂದ ಪುಂಡಾಟಿಕೆ ನಡೆದಿದೆ. ಗಾಲ್ವಾನ್ನಲ್ಲಿ ಮೋಸದಿಂದ ಸೈನಿಕರ ಮೇಲೆ ಮುಗಿಬಿದ್ದಿದ್ದಾರೆ. ಆಂಧ್ರದ ಕರ್ನಲ್ ಸಂತೋಷ್ ಬಾಬು ಸೇರಿ 20 ಮಂದಿ ಹತ್ಯೆಯಾಗಿದೆ. ಈ ಘಟನೆಯನ್ನ ನಾವೆಲ್ಲರೂ ಖಂಡಿಸಿದ್ದೇವೆ. ಚೀನಾ ಯಾವಾಗಲೂ ಇದನ್ನೇ ಮಾಡುತ್ತದೆ. ಮೊದಲು ಪ್ರೀತಿ ತೋರಿಸುತ್ತಾರೆ. ಹಿಂದೆ ಬೆನ್ನಿಗೆ ಚೂರಿ ಹಾಕುತ್ತಾರೆ. ಹಿಂದೆಯೂ ಹಲವು ಬಾರಿ ಹೀಗೆಯೇ ಮಾಡಿದ್ದಾರೆ.
ಬಾರ್ಡರ್ನಲ್ಲಿ ಪೆಟ್ರೋಲಿಂಗ್ ವೇಳೆ ಅಗ್ರಿಮೆಂಟ್ ಇದೆ. ಈ ವೇಳೆ ಯಾವುದೇ ಆಯುಧ ಇಟ್ಟುಕೊಳ್ಳುವಂತಿಲ್ಲ. ಇದು ಪೆಟ್ರೋಲಿಂಗ್ ವೇಳೆಯ ನಿಯಮ. ಆದರೆ, ಆ ನಿಯಮಗಳನ್ನ ಚೀನಾ ಉಲ್ಲಂಘಿಸಿದೆ. ನಮ್ಮ ಮೇಲೆ ಅವರು ದಾಳಿ ಮಾಡಿದಾಗ ಸುಮ್ಮನಿರಲು ಸಾಧ್ಯವಿಲ್ಲ. ಹೀಗಾಗಿ ದೇಶದ ಸೈನಿಕರ ಜೊತೆ ನಾವು ನಿಲ್ಲುತ್ತೇವೆ. ಕೇಂದ್ರ ಸರ್ಕಾರದ ಜೊತೆಗೂ ನಿಲ್ಲುತ್ತೇವೆ. ದೇಶದ ಸೈನಿಕರಿಗೆ ನಾವು ಸಹಕಾರ ನೀಡುವುದು ನಮ್ಮ ಕರ್ತವ್ಯ ಎಂದರು.
ಪಕ್ಷ, ಸರ್ಕಾರ ಯಾವುದೇ ಇರಬಹುದು. ಆದರೆ, ದೇಶದ ಹಿತಕ್ಕೆ ನಾವೆಲ್ಲರೂ ಆಧ್ಯತೆ ನೀಡಬೇಕು. ಚೀನಾ ನರಿ ಬುದ್ಧಿಯನ್ನ ಖಂಡಿಸಬೇಕು. ಆದರೆ, ಇಷ್ಟು ಘಟನೆ ನಡೆದರೂ ಸತ್ಯ ಹೊರಬಿದ್ದಿಲ್ಲ. ಬಾರ್ಡರ್ನಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ಸರ್ವಪಕ್ಷ ಸಭೆಯಲ್ಲಿ ಮೋದಿ ಹೇಳಿದ್ದಾರೆ. ಮೋದಿ ಹೇಳಿದ್ದೇ ಒಂದು, ಗಡಿಯಲ್ಲಿ ನಡೆದದ್ದೇ ಒಂದು. ಇದು ಇವತ್ತು ಉದ್ಭವಿಸಿರುವ ಪ್ರಶ್ನೆ. ಹೀಗಾಗಿ ಪ್ರಧಾನಿಯವರು ಸತ್ಯ ಬಹಿರಂಗ ಪಡಿಸಬೇಕು. ಏನೂ ಆಗಿಲ್ಲವೆಂದರೆ 20 ಸೈನಿಕರು ಸತ್ತಿದ್ಹೇಗೆ? ಅವರನ್ನ ಕೊಂದವರು ಯಾರು? ಇದರ ಬಗ್ಗೆ ಪ್ರಧಾನಿ ಸತ್ಯವನ್ನ ಬಹಿರಂಗ ಪಡಿಸಬೇಕು ಎಂದರು.