ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಮಂಜೂರು ಮಾಡಿದೆ. ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾರಿಮನ್ ಅವರು ರಾಗಿಣಿಗೆ ಜಾಮೀನು ನೀಡಿ ಆದೇಶಿಸಿದ್ದಾರೆ.
ಈ ಮೊದಲು ರಾಜ್ಯ ಹೈಕೋರ್ಟ್ ರಾಗಿಣಿ ಅವರ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. ಈ ನಿರ್ಧಾರದ ವಿರುದ್ಧ ರಾಗಿಣಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈಗ ರಾಗಿಣಿ ಪರ ಸಿದ್ಧಾರ್ಥ್ ಲೂಥ್ರಾ, ಸಿಸಿಬಿ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡನೆ ಮಾಡಿದ್ದರು.
ನಟಿ ರಾಗಿಣಿ ಮೇಲೆ ಐಪಿಸಿ ಸೆಕ್ಷನ್ 120ಬಿ ಹಾಗೂ ಎನ್ಡಿಪಿಎಸ್ ಕಾಯ್ದೆ- 1985ರ ಅಡಿಯಲ್ಲಿ ಬರುವ ಸೆಕ್ಷನ್ 21, 21ಸಿ, 27ಎ, 27ಬಿ ಹಾಗೂ ಸೆಕ್ಷನ್ 29ರ ಅಡಿಯಲ್ಲಿ ದೂರು ದಾಖಲಾಗಿದ್ದು, ರಾಗಿಣಿ, ಸೆಪ್ಟೆಂಬರ್ 4ರಂದು ಸಿಸಿಬಿಯಿಂದ ಬಂಧಿಸಲ್ಪಟ್ಟಿದ್ದರು.
ಇದಾದ ಎರಡು ದಿನಗಳ ನಂತರ ಅಂದರೆ ಸೆಪ್ಟೆಂಬರ್ 8ರಂದು ಮತ್ತೋರ್ವ ನಟಿ ಸಂಜನಾ ಗಲ್ರಾನಿಯನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.