ಬೆಂಗಳೂರು: ರಾಜ್‌ಕುಮಾರ್ ಪ್ರತಿಮೆ ಪಕ್ಕದಲ್ಲಿಯೇ ಪುನೀತ್ ಪ್ರತಿಮೆ (Puneeth Rajkumar statue) ಇಡಲಾಗುತ್ತಿದೆ. ಇಷ್ಟು ಬೇಗ ಹೀಗಾಗುತ್ತೆ ಅಂದುಕೊಂಡಿರಲಿಲ್ಲ ಎಂದು ಪುನೀತ್ ಪ್ರತಿಮೆಗೆ ಮುತ್ತಿಟ್ಟು ರಾಘವೇಂದ್ರ ರಾಜ್‌ಕುಮಾರ್ ಭಾವುಕರಾದ ಘಟನೆ ನಗರದ ಪಾಲಿಕೆ ಆವರಣದಲ್ಲಿ ನಡೆದಿದೆ.
ಬಿಬಿಎಂಪಿಗೆ ಭೇಟಿ ನೀಡಿದ್ದ ರಾಘವೇಂದ್ರ ರಾಜ್‌ಕುಮಾರ್, ಪಾಲಿಕೆ ಆವರಣದಲ್ಲಿರುವ ಡಾ.ರಾಜ್‌ಕುಮಾರ್ ಪ್ರತಿಮೆ ಪಕ್ಕ ಅಪ್ಪು ಪುತ್ಥಳಿ ಸ್ಥಾಪನೆಯ ಸಿದ್ಧತೆಗಳನ್ನು ವೀಕ್ಷಿಸಿದರು. ಬನಶಂಕರಿಯ ಸ್ಥಾಪತಿ ಕ್ರಿಯೇಷನ್‌ನಲ್ಲಿ ಪುನೀತ್ ಕಂಚಿನ ಪ್ರತಿಮೆ ನಿರ್ಮಾಣ ಆಗುತ್ತಿದೆ. ತಡವಾದರೂ ಪರವಾಗಿಲ್ಲ, ಪ್ರತಿಮೆ ಸುಂದರವಾಗಿ ಮಾಡಿ ಎಂದು ಇದೇ ವೇಳೆ ಹೇಳಿದರು.
'ಬಿಬಿಎಂಪಿ ಆವರಣದಲ್ಲಿ ಅಪ್ಪಾಜಿ ಪ್ರತಿಮೆ ಅನಾವರಣಕ್ಕೆ ಪುನೀತ್ ಹೋಗಿದ್ದ. ಈಗ ಅವನ ಪ್ರತಿಮೆ ಅಲ್ಲಿ ಅಪ್ಪಾಜಿ ಪಕ್ಕ ಸ್ಥಾಪನೆ ಆಗ್ತಿದೆ. ನಾವು ಹೀಗಾಗುತ್ತೆ ಅಂದುಕೊಂಡಿರಲಿಲ್ಲ. ಅಲ್ಲೂ ಅಪ್ಪಾಜಿ ಪಕ್ಕ ಮಲಗಿಸಿದ್ದೀವಿ. ಇಲ್ಲೂ ಅಪ್ಪಾಜಿ ಪಕ್ಕ ಪ್ರತಿಮೆ ಸ್ಥಾಪನೆ ಮಾಡ್ತಿದ್ದಾರೆ. ಇದು ಬೆಂಗಳೂರಿನ ಮೊದಲ ಪ್ರತಿಮೆ. ಪುನೀತ್ ಇಷ್ಟು ಬೇಗ ಹೀಗಾಗ್ತಾನೆ ಅಂತ ನಾವ್ಯಾರೂ ಯೋಚಿಸಿರಲಿಲ್ಲ' ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದರು.
ಇದನ್ನೂ ಓದಿ: ದೇವರಿಗೆ ಮುಡಿ, ಅಪ್ಪುಗೆ ಹಾಡು: ನಟಿ ವಿಜಯಲಕ್ಷ್ಮೀ ಗಾನ ನಮನ