ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ 'ಜೇಮ್ಸ್' ಚಿತ್ರದ ಪಾತ್ರಕ್ಕೆ ಅಪ್ಪು ಅವರ ಧ್ವನಿಯನ್ನೇ ಸೇರಿಸಲಾಗುತ್ತಿದೆ. ಏ.22 ರಂದು 'ಜೇಮ್ಸ್' ಅಪ್ಡೇಟ್ ಆಗಿ ಪ್ರದರ್ಶನ ಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ. ಭಾನುವಾರ ಖಾಸಗಿ ಹೋಟೆಲ್ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ನಿರ್ದೇಶಕ ಚೇತನ್ ಕುಮಾರ್ ಈ ವಿಚಾರವನ್ನು ತಿಳಿಸಿದ್ದಾರೆ.
ಸೌಂಡ್ ಎಂಜಿನಿಯರಿಂಗ್ ತಂತ್ರಜ್ಞಾನ ಬಳಸಿ ಬರುವ ಶುಕ್ರವಾರ ಅಭಿಮಾನಿಗಳು ಚಿತ್ರವನ್ನು ಹೊಸ ರೂಪದಲ್ಲಿ ಕಣ್ತುಂಬಿಕೊಳ್ಳಲಿದ್ದಾರೆ. ಅಪ್ಪು ಒರಿಜಿನಲ್ ಧ್ವನಿಯನ್ನು 'ಜೇಮ್ಸ್' ಚಿತ್ರಕ್ಕೆ ಸೇರಿಸಲಾಗುತ್ತಿದೆ. ಅಂದಿನಿಂದ ಹೊಸ ರೂಪದಲ್ಲಿ ಪ್ರೇಕ್ಷಕರಿಗೆ 'ಜೇಮ್ಸ್' ಲಭ್ಯವಾಗಲಿದೆ ಎಂದು ಚೇತನ್ ಕುಮಾರ್ ಮಾಹಿತಿ ನೀಡಿದ್ದಾರೆ.
ವಾಯ್ಸ್ ಮಿಕ್ಸಿಂಗ್ ತಂತ್ರಜ್ಞಾನ ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಲ್ಲಿಯೇ ಮೊದಲ ಪ್ರಯತ್ನವಾಗಿದೆ. ಹಲವು ವರ್ಷಗಳಿಂದ ರಿಸರ್ಚ್ ನಡೆಯುತ್ತಿತ್ತು. ಸಿನಿಮಾಗಳಿಗೆ ಎಲ್ಲಾ ಭಾಷೆಗೆ ಆಯಾ ಕಲಾವಿದರ ಧ್ವನಿ ಸೇರಿಸುವ ಮೊದಲ ಪ್ರಯತ್ನ ಇದಾಗಿದೆ. ನಟರ ಧ್ವನಿಯನ್ನು ಮರು ಸೃಷ್ಟಿಸುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿರುವ ಸೌಂಡ್ ಇಂಜಿನಿಯರ್ ಶ್ರೀನಿವಾಸ್ರಾವ್ ಅವರು, ಕೊನೆಗೂ 'ಜೇಮ್ಸ್' ಚಿತ್ರದಲ್ಲಿ ಪುನೀತ್ ಅವರ ಧ್ವನಿಯನ್ನು ರಿ ಕ್ರಿಯೇಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ತಾಂತ್ರಿಕ ವಿಚಾರದ ಬಗ್ಗೆ ಮಾತನಾಡಿದ ಚೇತನ್ ಕುಮಾರ್, 'ಜೇಮ್ಸ್ ಚಿತ್ರದಲ್ಲಿ ಅಪ್ಪು ಸರ್ ಧ್ವನಿ ತರಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇವೆ. ತಾಂತ್ರಿಕ ಸಂಸ್ಥೆ ಒಂದಕ್ಕೆ ಇದರ ಕೆಲಸ ವಹಿಸಿದ್ದೇವು. ಅಪ್ಪು ಅವರ 15 ಗಂಟೆಯ ಧ್ವನಿ ಸಂಗ್ರಣೆಯಿಂದ, ಈ ಸಂಸ್ಥೆ ಜೇಮ್ಸ್ ಚಿತ್ರದಲ್ಲಿ ಅಪ್ಪು ಧ್ವನಿ ಉಳಿಸಿದೆ. ಮೂರು ವರ್ಷಗಳ ಪ್ರಯತ್ನದಲ್ಲಿ ಇದು ಈ ಸಂಸ್ಥೆಗೆ ಸಿಕ್ಕ ಮೊದಲ ಯಶಸ್ಸು' ಎಂದು ಹೇಳಿದ್ದಾರೆ.
ಒಂದು ತಿಂಗಳು ಪೂರೈಸಿದ ಚಿತ್ರ: ಪುನೀತ್ ರಾಜ್ಕುಮಾರ್ ನಾಯಕ ನಟನಾಗಿ ನಟಿಸಿದ ಕೊನೆಯ ಸಿನಿಮಾ 'ಜೇಮ್ಸ್' ಮಾ.17ರಂದು ತೆರೆಕಂಡಿತ್ತು. ಅಪ್ಪು ಜನ್ಮ ದಿನದಂದು ರಿಲೀಸ್ ಆಗಿದ್ದ ಚಿತ್ರ ತೆರೆ ಕಂಡು ಒಂದು ತಿಂಗಳನ್ನು ಪೂರೈಸಿದೆ. ಚಿತ್ರದಲ್ಲಿ ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಿದ್ದಾರೆ. ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರವನ್ನು ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡಿದ್ದಾರೆ.
ಒಟಿಟಿಯಲ್ಲಿ ರಿಲೀಸ್: ಈ ತಿಂಗಳ(ಏಪ್ರಿಲ್) 14ರಂದು 'ಜೇಮ್ಸ್' ಸೋನಿ ಲೈವ್ ಒಟಿಟಿಯಲ್ಲಿ ರಿಲೀಸ್ ಆಗಿದೆ. 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ಇದನ್ನೂ ಓದಿ: 'ಕೆಜಿಎಫ್' ದಾಖಲೆ ಮುರಿದ 'ಜೇಮ್ಸ್'.. ಮೊದಲ ದಿನದ ಕಲೆಕ್ಷನ್ ಇಷ್ಟು ₹____ ಕೋಟಿ