ಬೆಂಗಳೂರು: ವಿಶ್ವದಾದ್ಯಂತ ಪಬ್ಜಿ ಗೇಮ್ ಹುಚ್ಚು ಹೆಚ್ಚಾಗುತ್ತಿದೆ. ಈ ಮೊಬೈಲ್ ಆಟದ ಹುಚ್ಚಿಗೆ ಹದಿಹರೆಯದವರಿಂದ ಹಿಡಿದು ಮಧ್ಯವಯಸ್ಕರವರೆಗೂ ಮಾನಸಿಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಈ ದುಷ್ಪರಿಣಾಮಗಳನ್ನು ತಡೆಗಟ್ಟಲು ಪಬ್ಜಿ ಗೇಮ್ ಆಡಲು ಸಮಯದ ನಿಯಂತ್ರಣ ತಂದಿದ್ದಾರೆ.
ಗೇಮ್ ತಯಾರಕರಾದ ಟೆನ್ಸೆಂಟ್ ಸಂಸ್ಥೆಯು, ಮೊಬೈಲ್ ಆಟವನ್ನು ದಿನಕ್ಕೆ 6 ಗಂಟೆಗಳ ಕಾಲ ಮಾತ್ರ ಅಡಬಹುದು ಎಂದು ನಿರ್ಧರಿಸಿದೆ. ಇದರಂತೆ ಪ್ರತಿನಿತ್ಯ ಆರು ಗಂಟೆಯ ಆಟದ ನಂತರ ಮೊಬೈಲಿನಲ್ಲಿ "ನೀವು ಇಂದು 6 ಗಂಟೆಗಳ ಕಾಲ ಆಟವನ್ನು ಆಡಿದ್ದೀರಿ, ನಂತರ ಬನ್ನಿ" ಎಂಬ ಸಂದೇಶ ತೋರಿಸುತ್ತದೆ.
ಈಗಾಗಲೇ ಈ ಆಟದಿಂದ ಸಾಕಷ್ಟು ಜನ ಬಂಧನಕ್ಕೂ ಒಳಗಾಗಿದ್ದರು. ಇದಲ್ಲದೆ ಗುಜರಾತ್ನ ರಾಜಕೋಟ್ ಜಿಲ್ಲೆಯಲ್ಲಿ ಹದಿಹರೆಯದ ಹುಡುಗನೊಬ್ಬ ತನ್ನ ತಂದೆಯ ಕಾರ್ಡ್ ಬಳಸಿಕೊಂಡು 50,000 ರೂಪಾಯಿಗಳನ್ನು ಯಾರಿಗೂ ತಿಳಿಸದೆ ಆತನ ಸ್ನೇಹಿತರಿಗೆ ಟ್ರಾನ್ಸ್ಫರ್ ಮಾಡಿದ್ದ. ಈ ರೀತಿಯ ಸಾಕಷ್ಟು ಘಟನೆಗಳು ಬೆಳಕಿಗೆ ಬಂದಿದ್ದು, ಹೀಗಾಗಿ ಆ್ಯಪ್ ತಯಾರಿಕಾ ಸಂಸ್ಥೆ ಈ ಆಟದ ಕಾಲಾವಧಿಯನ್ನು ಮೊಟಕುಗೊಳಿಸಿದೆ.
ಆದರೆ ಈ ಬಗ್ಗೆ ಸಂಸ್ಥೆಯಿಂದ ಯಾವುದೇ ಅಧಿಕೃತ ಹೇಳಿಕೆ ಇನ್ನೂ ಹೊರಬಂದಿಲ್ಲ. ಸಾಕಷ್ಟು ಆಟಗಾರರಿಗೆ ಆಟವಾಡುವ ಎರಡು ಗಂಟೆಯ ನಂತರ ಹಾಗೂ ನಾಲ್ಕು ಗಂಟೆಯ ನಂತರ ಈ ರೀತಿಯ ಸಂದೇಶ ಕಂಡು ಬಂದಿರುವುದಂತೂ ನಿಜ.