ಬೆಂಗಳೂರು: ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕ ಹಗರಣವು ಕೊಲೆಯಂತಹ ಅಪರಾಧಕ್ಕಿಂತಲೂ ಹೇಯ ಕೃತ್ಯವಾಗಿದೆ. ಕೊಲೆಯಲ್ಲಿ ಒಬ್ಬರು ಬಾಧಿತರಾಗುತ್ತಾರೆ. ಆದರೆ, ಪಿಎಸ್ಐ ಪರೀಕ್ಷಾ ಅಕ್ರಮದಲ್ಲಿ ಇಡೀ ಸಮಾಜವೇ ಸಂಕಷ್ಟಕ್ಕೆ ಸಿಲುಕಿದಂತಾಗಿದೆ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಹಗರಣದಲ್ಲಿ ಬಂಧಿತರಾಗಿರುವ ಆರೋಪಿಗಳಾದ ಸಿ.ಎನ್.ಶಶಿಧರ್ ಮತ್ತಿತರರು ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ನೇತೃತ್ವದ ಪೀಠ, ಈ ಪ್ರಕರಣದಲ್ಲಿ ಸಂತ್ರಸ್ತರು ಬಹಳ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಹಸ್ರಾರು ಜನ ಅಮಾಯಕರು ಅಕ್ರಮಗಳಿಂದಾಗಿ ಬಾಧಿತರಾಗಿದ್ದಾರೆ. ಇಂತಹ ಅಕ್ರಮಗಳನ್ನು ನೋಡುತ್ತಾ ನ್ಯಾಯಾಲಯವು ಕಣ್ಣುಮುಚ್ಚಿ ಕೂರಲಾಗದು ಎಂದು ಆಕ್ರೋಶ ವ್ಯಕ್ತಪಡಿಸಿತು.
ಆರೋಪಿಗಳ ಪರ ವಕೀಲರು ಸುದೀರ್ಘ ವಾದ ಮಂಡಿಸಿ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ಜಾಮೀನು ಅರ್ಜಿಗೆ ಒಂದು ಗಂಟೆ ವಾದ ಮಂಡಿಸುವುದು ಅಗತ್ಯವೇ?, ಜಾಮೀನು ನೀಡಲು ಆಧಾರಗಳನ್ನು ಮಂಡಿಸಬೇಕು ಅಷ್ಟೇ. ನ್ಯಾಯಾಲಯ ಏನಾದರೂ ಪ್ರಶ್ನೆ ಹಾಕಿದ್ರೆ ನಿಮ್ಮ ವಿಚಾರಗಳಿಗೆ ತೊಡಕಾಗುತ್ತದೆ ಎಂದು ನಾನು ಸುಮ್ಮನೆ ಕುಳಿತುಕೊಳ್ಳಬೇಕಾಯಿತು ಎಂದು ಅರ್ಜಿದಾರರ ಪರ ವಕೀಲರಿಗೆ ತಿಳಿಸಿತು. ಸರ್ಕಾರದ ಪರ ವಕೀಲರು ಜಾಮೀನು ನೀಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಒಎಂಆರ್ ಶೀಟ್‌ಗಳಿಗೆ ಸಂಬಂಧಿಸಿದಂತೆ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ತನಿಖೆಗೆ ಸಂಬಂಧಿಸಿದಂತೆ ಸಿಐಡಿ ಪೊಲೀಸ್ ಮಹಾನಿರ್ದೇಶಕರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ವರದಿಯನ್ನು ನ್ಯಾಯಿಕ ರಿಜಿಸ್ಟ್ರಾರ್‌ಗೆ ಸಲ್ಲಿಸುವಂತೆ ನ್ಯಾಯಮೂರ್ತಿಗಳು ಆದೇಶಿಸಿದರು. ಬಳಿಕ ವಿಚಾರಣೆಯನ್ನು ಜುಲೈ 20ರ ಮಧ್ಯಾಹ್ನ 2.30ಕ್ಕೆ ಮುಂದೂಡಲಾಯಿತು.
ಇದೇ ಪ್ರಕರಣದ ಕುರಿತು ನಿನ್ನೆ ಬೆಳಗ್ಗೆ ಅರ್ಜಿ ವಿಚಾರಣೆ ಆರಂಭಿಸಿದ ನ್ಯಾಯಾಲಯ, ಪಿಎಸ್ಐ ಹಗರಣದಲ್ಲಿ ಬಂಧಿಸಲ್ಪಟ್ಟಿರುವ ಪೊಲೀಸ್ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮೃತ್ ಪೌಲ್ ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ಹೇಳಿಕೆಯನ್ನು ಏಕೆ ದಾಖಲಿಸಿಕೊಂಡಿಲ್ಲ ಎಂದು ಪ್ರಶ್ನಿಸಿತು. ಜೊತೆಗೆ ಇದು ತನಿಖೆಯನ್ನು ಸರಿಯಾದ ರೀತಿಯಲ್ಲಿ ನಡೆಸುವ ವಿಧಾನವಲ್ಲ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಇದನ್ನೂ ಓದಿ: ಎಸಿಬಿ ಸೇರಿ ಉನ್ನತ ಹುದ್ದೆಗಳಿಗೆ ಕಳಂಕಿತ ಅಧಿಕಾರಿಗಳನ್ನು ನೇಮಿಸದಂತೆ ಹೈಕೋರ್ಟ್ ನಿರ್ದೇಶನ